Breaking News
Home / Uncategorized / ಸಾವಯವ-ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಜ.೨೫ ರಿಂದ

ಸಾವಯವ-ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಜ.೨೫ ರಿಂದ

ಸಾವಯವ-ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಜ.೨೫ ರಿಂದ

ಬೆಳಗಾವಿ, ಜ.೨೨(ಕರ್ನಾಟಕ ವಾರ್ತೆ): ಕಡಿಮೆ ಮಳೆಯಾದಾಗಲೂ ಲಾಭದಾಯಕ ಬೆಳೆ ಬೆಳೆಯಬಹುದು ಹಾಗೂ ಜನರು ಸಿರಿಧಾನ್ಯಗಳನ್ನು ಆಹಾರವಾಗಿ ಬಳಸಿದರೆ ವಿವಿಧ ರೋಗಗಳನ್ನು ನಿಯಂತ್ರಿಸಿಕೊಳ್ಳಬಹುದು. ಈ ಕಾರಣಗಳಿಗಾಗಿ ಸಿರಿಧಾನ್ಯಗಳು ಬಹಳ ಮಹತ್ವದ್ದಾಗಿವೆ. ಉತ್ತಮ ಆರೋಗ್ಯಕ್ಕಾಗಿ, ಉತ್ತಮ
ಪರಿಸರಕ್ಕಾಗಿ ಹಾಗೂ ರೈತರ ಶ್ರೇಯಸ್ಸಿಗಾಗಿ ಸಿರಿಧಾನ್ಯಗಳು ಅವಶ್ಯಕವಾಗಿವೆ ಈ ಕುರಿತು
ಜಾಗೃತಿ ಮೂಡಿಸಲು ಜನವರಿ 25 ಹಾಗೂ 26 ರಂದು ಬೆಳಗಾವಿಯ ಶಿವಬಸವ ನಗರದ ಎಸ್. ಜಿ ಬಾಳೇಕುಂದ್ರಿ, ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸಾವಯವ
ಮತ್ತು ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ(ಜ.೨೨) ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ಪ್ರಮಾಣದಲ್ಲಿ ಮಳೆ ಬಾರದೆ ಇರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.
ಇನ್ನೊಂದು ಕಡೆಗೆ ಜನರು ಅಸಹಜ ಜೀವನಶೈಲಿ ಅಳವಡಿಸಿಕೊಂಡಿದ್ದು ಅಸಮತೋಲನ
ಪೌಷ್ಟಿಕಾಂಶ ಮತ್ತು ಅಲ್ಪನಾರಿನ ಆಹಾರ ಪದಾರ್ಥಗಳನ್ನು ಸೇವಿಸುತ್ತಿರುವುದರಿಂದ ಹಲವಾರು
ಮಾರಕ ರೋಗಗಳಿಂದ ಬಳಲುತ್ತಿದ್ದಾರೆ.

ಈ ಸಂದರ್ಭದಲ್ಲಿ ನಮ್ಮ ಪಾರಂಪರಿಕ ಬೆಳೆಗಳಾದ
ಸಿರಿಧಾನ್ಯಗಳನ್ನು ಕಡಿಮೆ ಫಲವತ್ತತೆ ಹಾಗೂ ಕಡಿಮೆ ಮಳೆಯಲ್ಲಿಯೂ ಬೆಳೆಯಬಹುದಾಗಿದೆ.
ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರಗಳಾಗಿವೆ. ಇವುಗಳಲ್ಲಿ ಯತೇಚ್ಚವಾದ ನಾರಿನ ಅಂಶ
ಹಾಗೂ ವಿವಿಧ ಪೋಷಕಾಂಶ ಮತ್ತು ಖನಿಜಾಂಶಗಳು ಇರುತ್ತವೆ.
ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಸಾವಯವ ಮತ್ತು ಸಿರಿಧಾನ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಡಾ.ರಾಜೇಂದ್ರ ವಿವರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಕೃಷಿಕ ಸಮಾಜ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ಮೇಳ ನಡೆಯಲಿದೆ.

ಜ.೨೫ ರಂದು ಉದ್ಘಾಟನಾ ಸಮಾರಂಭ:

ಸಾವಯವ ಮತ್ತು ಸಿರಿಧಾನ್ಯ ಮೇಳ ಮತ್ತು ಫಲಪುಷ್ಪ ಪ್ರದರ್ಶನವನ್ನು ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಮತ್ತು ಕೃಷಿ ಸಚಿವರಾದ
ಲಕ್ಷ್ಮಣ ಸವದಿ ಅವರು ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ರೈಲ್ವೆ ರಾಜ್ಯ
ಸಚಿವರು ಸುರೇಶ ಅಂಗಡಿ, ಬೃಹತ್ ಮತ್ತು ಮಧ್ಯಮ
ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಹುಬ್ಬಳ್ಳಿ-ಧಾರವಾಡ ಮತ್ತು
ಬೆಳಗಾವಿ ಜಗದೀಶ ಶೆಟ್ಟರ, ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಸಚಿವರಾದ ಶಶಿಕಲಾ ಜೊಲ್ಲೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಸರ್ಕಾರದ ಮುಖ್ಯ
ಸಚೇತಕರು, ಜಿಲ್ಲಾ ಪಂಚಾಯತ ಅಧ್ಯಕ್ಷರು, ಮುಖ್ಯಮಂತ್ರಿಗಳ
ರಾಜಕೀಯ ಕಾರ್ಯದರ್ಶಿಗಳು, ಮಾನ್ಯ ಅಧ್ಯಕ್ಷರು, ಲೋಕಸಭಾ ಸದಸ್ಯರು ಭಾಗವಹಿಸಲಿದ್ದಾರೆ.

ಮೇಳದಲ್ಲಿ ೭೫ ಮಳಿಗೆಗಳು; ಸಾಂಸ್ಕೃತಿಕ ಕಾರ್ಯಕ್ರಮಗಳು:

ಸದರಿ ಮೇಳದಲ್ಲಿ 75 ಕ್ಕೂ ಹೆಚ್ಚು ಮಳಿಗೆಗಳಿದ್ದು ಇವುಗಳಲ್ಲಿ ಸಿರಿಧಾನ್ಯ ಹಾಗೂ ಸಾವಯವ ಪದಾರ್ಥಗಳ ಕುರಿತು ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿರುತ್ತದೆ.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮಾಹಿತಿ ಮಳಿಗೆಗಳು ಅಲ್ಲದೆ
ತೋಟಗಾರಿಕೆ ಇಲಾಖೆಯವರು ಫಲಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಸಸಿಗಳ
ಪ್ರದರ್ಶನ ಮಾಡಲಿರುವರು. ಜೇನು ಕೃಷಿ ಪ್ರದರ್ಶನ, ಹಣ್ಣುಗಳಿಂದ ಅಲಂಕೃತ ಕಲಾಕೃತಿಗಳ
ಪ್ರದರ್ಶನ ಮತ್ತು ಇದರೊಂದಿಗೆ ಮೇಳದಲ್ಲಿ ಉತ್ತಮ ತಳಿಯ ಎತ್ತು ಹಾಗೂ ಆಡುಗಳ
ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಮೇಳದಲ್ಲಿ ನಿರಂತರವಾಗಿ ನುರಿತ ತಜ್ಞರಿಂದ
ಹಾಗೂ ಪ್ರಗತಿ ಪರ ರೈತರಿಂದ ಸಾವಯವ ಮತ್ತು ಸಿರಿಧಾನ್ಯ ಕುರಿತು ಪ್ರಚಲಿತ ವಿದ್ಯಮಾನದ
ಬಗ್ಗೆ ಉಪನ್ಯಾಸ, ಅನುಭವ ಹಂಚಿಕೆ ಹಾಗೂ ಸಂವಾದ ಕಾರ್ಯಕ್ರಮಗಳನ್ನು
ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಇದರೊಂದಿಗೆ ಎರಡು ದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಆಯೋಜಿಸಲಾಗಿರುತ್ತದೆ. ಕಾರಣ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸಿ ಮೇಳದ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಬೆಳಗಾವಿ ದೂರವಾಣಿ
0831-2407232 ಹಾಗೂ ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ ಇವರ ಕಛೇರಿ
ದೂರವಾಣಿ 0831-2451422 ಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಜ.೨೪ ರಂದು ಸಿರಿಧಾನ್ಯ ನಡಿಗೆ:

ಸಾವಯವ ಸಿರಿಧಾನ್ಯ ಮೇಳದ ಅಂಗವಾಗಿ ಸಾಂಪ್ರದಾಯಿಕ ಆರೋಗ್ಯಕರ ಆಹಾರಗಳ ಪುನರಾನ್ವೇಷಣೆಗಾಗಿ ಜ.೨೪ ಸಿರಿಧಾನ್ಯ ನಡಿಗೆ ಆಯೋಜಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ತಿಳಿಸಿದರು.

ಅಂದು ಬೆಳಿಗ್ಗೆ ೬.೩೦ ಗಂಟೆಗೆ ರಾಣಿ ಚೆನ್ನಮ್ಮ ವೃತ್ತದಿಂದ ‌ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಮೈದಾನದವರೆಗೆ ಸಿರಿಧಾನ್ಯ ನಡಿಗೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೆಕರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-೨೦೨೦ ಪ್ರಚಾರಸಾಮಗ್ರಿಗಳನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಬಿಡುಗಡೆಗೊಳಿಸಿದರು.
*****

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *