Breaking News

ರುದ್ರಣ್ಣ ಆತ್ಮಹತ್ಯೆ ಕೇಸ್‌ ರಾಷ್ಟ್ರಪತಿ, ಪ್ರಧಾನ ಮಂತ್ರಿ ಕಚೇರಿ ಅಂಗಳಕ್ಕೆ

ಬೆಳಗಾವಿ-ಬೆಳಗಾವಿಯ ತಹಸೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತ್‌ ರುದ್ರಣ್ಣ ಯಡವನ್ನವರ ಆತ್ಮಹತ್ಯೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದ್ದು, ಇದೀಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಕೋರಿ ತಹಸೀಲ್ದಾರ ಕಚೇರಿ ಸಿಬ್ಬಂದಿ ರಾಷ್ಟ್ರಪತಿ, ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ.ಹಾಗಾಗಿ, ಈ ಪ್ರಕರಣ ಈಗ ರಾಷ್ಟ್ರಪತಿ ಅಂಗಳಕ್ಕೆ ಹೋದಂತಾಗಿದೆ.

ಬೆಳಗಾವಿ ತಹಸೀಲ್ದಾರ ಕಚೇರಯಲ್ಲಿಿ ನ. 5 ರಂದು ಎಸ್‌ಡಿಸಿ ರುದ್ರಣ್ಣ ಯಡವನ್ನವರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಪ್ತ ಕಾರ್ಯದರ್ಶಿ ಸೋಮು ದೊಡವಾಡಿ, ತಹಸೀಲ್ದಾರ ಬಸವರಾಜ ನಾಗರಾಳ ಮತ್ತು ಎಫ್‌ಡಿಸಿ ಅಶೋಕ ಕಬ್ಬಲಿಗೇರ ಕಿರುಕುಳವೇ ಕಾರಣ ಎಂದು ವ್ಯಾಟ್ಸಪ್‌ ಗ್ರೂಪ್‌ನಲ್ಲಿ ಉಲ್ಲೇಖಿಸಿ, ಬಳಿಕ ರುದ್ರಣ್ಣ ಆತ್ಮಹತ್ಯೆಗೆ ಶರಣಾಗಿದ್ದ. ಈ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿತ್ತು. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ಈಗ ಈ ತನಿಖೆ ದಾರಿತಪ್ಪುತ್ತಿದೆ ಎಂಬ ಆತಂಕ ಬೆಳಗಾವಿ ತಹಸೀಲ್ದಾರ ಕಚೇರಿ ಸಿಬ್ಬಂದಿಯದ್ದು. ಹಾಗಾಗಿ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡುವಂತೆ ಕೋರಿ ತಹಸೀಲ್ದಾರ ಕಚೇರಿ ಸಿಬ್ಬಂದಿ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ಗೃಹ ಸಚಿವರೆಗೆ ಪತ್ರಬರೆದಿದ್ದಾರೆ. ಆದರೆ, ಈ ಪತ್ರದಲ್ಲಿ ಯಾವ ಸಿಬ್ಬಂದಿಯ ಹೆಸರನ್ನೂ ಉಲ್ಲೇಖಿಸಲಾಗಿಲ್ಲ. ಇದು ಕೂಡ ಅನಾಮಧೇಯ ಪತ್ರವಾಗಿದೆ.

ರುದ್ರಣ್ಣ ಸಾವಿಗೆ ಕಾರಣರಾದ ತಹಶಿಲ್ದಾರ್ ಬಸವರಾಜ್ ನಾಗರಾಳಗೆ ಕೆಲ ಸಿಬ್ಬಂದಿ ಸಹಾಯ ಮಾಡುತ್ತಿದ್ದಾರೆ. ಅಲ್ಲದೇ, ವಿಚಾರಣೆ ವೇಳೆ ತಹಸೀಲ್ದಾರ ವಿರುದ್ಧ ಹೇಳಿಕೆ ನೀಡದಂತೆ ಅಧಿಕಾರಿಗಳ ಮೇಲೆ ತೀವ್ರ ಒತ್ತಡವನ್ನೂ ಹೇರಲಾಗುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳಾದ ಎಸ್‌.ಪಿ ಶಿಂಧೆ, ಕಿರಣ್ ತೋರಗಲ್, ಬಸಗೌಡ ಪಾಟೀಲ, ಬೆಳಗಾವಿ ತಹಶೀಲ್ದಾರ್ ಕಚೇರಿಯ ಎಸ್‌ಡಿಸಿ ಸುರೇಖಾ ನೇರ್ಲಿ ಮೂಲಕ ಇತರ ಸಿಬ್ಬಂದಿ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ನವೆಂಬರ್ 5 ರಂದು ಎಸ್‌ಡಿಸಿ ರುದ್ರಣ್ಣ ತಹಶೀಲ್ದಾರ್ ಚೇಂಬರ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ರುದ್ರಣ್ಣ ಪತ್ನಿ ಗಿರಿಜಾ ಜೊತೆಗೆ ಎಸ್‌ಡಿಸಿ ಸುರೇಖಾ ನೇರ್ಲಿ ಕೂಡ ದೂರು ನೀಡಲು ಹೋಗಿದ್ದರು. ಸತ್ತವನು ಸತ್ತಿದ್ದಾನೆ, ಮುಂದೆ ಏನು ಆಗಬೇಕು ಅದನ್ನು ಮಾಡುವಂತೆ ದೂರುದಾರರ ಧಿಕ್ಕು ತಪ್ಪಿಸುವ
ಕೆಲಸವಾಗಿದೆ. ಈ ಹಿಂದೆ ತಹಶಿಲ್ದಾರ್ ಕಚೇರಿಯ ಜವಾನ ಪ್ರದೀಪ ಆತ್ಮಹತ್ಯೆ ಹಿಂದೆಯೂ ಸುರೇಖಾ ಕೈವಾಡ ಇದೆ. ಈ ಪ್ರಕರಣವನ್ನು ತಹಶಿಲ್ದಾರ್ ಡ್ರೈವರ್ ಯಲ್ಲಪ್ಪ ಬಡಸದ, ಎಸ್‌ಪಿ ಶಿಂಧೆ ಮುಚ್ಚಿ ಹಾಕಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತಹಶಿಲ್ದಾರ್ ಬಸವರಾಜ್‌ಗೆ ನಿರೀಕ್ಷಣಾ ಜಾಮೀನು ಸಿಕ್ಕಾಗ ಇದೇ ಎಸ್‌ಸಿ ಶಿಂಧೆ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದರು ಎನ್ನಲಾಗಿದೆ. ಅಲ್ಲದೇ, ಆಪಾದಿತರ ವಿರುದ್ಧ ಹೇಳಿಕೆ‌ ನೀಡುವಂತೆ ಕಚೇರಿ ಸಿಬ್ಬಂದಿಗೆ‌ ಎಸ್‌.ಪಿ. ಶಿಂಧೆ ಸೂಚನೆ ನೀಡಿದ್ದಾರೆ. ಎಸ್‌.ಪಿ. ‌ಶಿಂಧೆ ವಿರುದ್ಧ ಮಾತನಾಡುವ ಹಲವು ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಎಸ್‌ಡಿಸಿ ರುದ್ರಣ್ಣ ಆತ್ಮಹತ್ಯೆ ಬಳಿಕ ತಹಶಿಲ್ದಾರ್ ಕಚೇರಿಯ ಸಿಬ್ಬಂದಿ ಪ್ರದೀಪ‌ ತೋರಗಲ್ಲ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಿದರೆ ‌ಈ ಕೇಸ್ ಸಲುವಾಗಿ ಹೊರಟಿದ್ದಾರೆ ಎಂಬುದು ತಿಳಿದಿದೆ

ಸಿಬ್ಬಂದಿ ಬೆದರಿಸಿ, ತಲೆತುಂಬಿ ವಿಚಾರಣೆ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ತಕ್ಷಣವೇ ಈ ಪ್ರಕರಣ ಸಿಬಿಐಗೆ ವಹಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡುವಂತೆ ಪತ್ರ ಮುಖೇನ ಬೆಳಗಾವಿ ತಹಸೀಲ್ದಾರ ಕೆಲ ಸಿಬ್ಬಂದಿ ಮನವಿ ಮಾಡಿದ್ದಾರೆ.

Check Also

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು …

Leave a Reply

Your email address will not be published. Required fields are marked *