ಸಾಧನೆಯ ಸಾಮ್ರಾಟ, ಪ್ರಭಾಕರ ಕೋರೆ,ಅಮೃತ ಮಹೋತ್ಸವಕ್ಕೆ ಬೆಳಗಾವಿ ಸಜ್ಜು….

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಹಿರಿಯ ರಾಜಕಾರಣಿ ಡಾ.ಪ್ರಭಾಕರ ಕೋರೆ ಅವರ ೭೫ನೇ ಜನ್ಮದಿನದ ಅಮೃತ ಮಹೋತ್ಸವ ಸಮಾರಂಭಕ್ಕೆ ಕುಂದಾನಗರಿ ಬೆಳಗಾವಿ ಸಜ್ಜುಗೊಂಡಿದೆ.

ಶನಿವಾರ ಮಧ್ಯಾಹ್ನ ೨ ಗಂಟೆಗೆ ನಡೆಯುವ ಕೋರೆ ಅವರ ಅಮೃತ ಮಹೋತ್ಸವಕ್ಕೆ ನೆಹರು ನಗರ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಬೃಹತ್ ಶಾಮಿಯಾನ, ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು ೧ ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಸೇರಿದಂತೆ ರಾಷ್ಟ್ರೀಯ ಘಟಾನುಘಟಿ ನಾಯಕರು ಕೋರೆ ಅವರ ಅಮೃತ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುವರು.
ನಗರದ ಪ್ರಮುಖ ಮಾರ್ಗಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆ ಪ್ರಭಾಕರ ಕೋರೆ ಅವರಿಗೆ ಶುಭ ಕೋರಿರುವ ಬ್ಯಾನರ್, ಕಟೌಟ್ ಹಾರಾಜಿಸುತ್ತಿವೆ. ಮುಖ್ಯ ಅತಿಥಿಯಾಗಿ ಕೇಂದ್ರ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರದಾನ ಆಗಮಿಸುವರು. ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರದ ಸಿಎಂ ಪ್ರಮೋದ ಸಾವಂತ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ, ಮಾಜಿ ಸಚಿವ ಡಾ.ಶಾಮನೂರ ಶಿವಶಂಕಪ್ಪ, ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ಪಾಟೀಲ ಆಗಮಿಸುವರು.

ಈ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ೧ ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವ ಜನತೆಗೆ ನಗರ ಆರು ಕಡೆಗಳಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಚಿಕ್ಕೋಡಿ ಭಾಗದಿಂದ ಬರುವ ಜನತೆಗೆ ರಾಷ್ಟ್ರೀಯ ಹೆದ್ದಾರಿಯ ಬಳಿಇರುವ ಭೂತರಾಮನಹಟ್ಟಿಯ ಮುಕ್ತಿಮಠದಲ್ಲಿ, ಗೋಕಾಕ ಭಾಗದಿಂದ ಆಗಮಿಸುವ ಜನತೆಗೆ ಕಣಬರ್ಗಿಯ ಸಂಕಲ್ಪ ಗಾರ್ಡನಲ್ಲಿ, ಬೈಲಹೊಂಗಲ, ಸವದತ್ತಿ ಭಾಗದ ಜನತೆಗೆ ನಿಲಜಿಯಲ್ಲಿ, ಬೆಳಗಾವಿ ಮತ್ತು ಖಾನಾಪುರ ಭಾಗದ ಜನತೆಗೆ ನಾಗನೂರ ರುದ್ರಾಕ್ಷಿಮಠದಲ್ಲಿ ಹಾಗೂ ಧಾರವಾಡ, ದಾವಣಗೆರೆ ಭಾಗದ ಜನತೆಗೆ ಧರ್ಮನಾಥ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಿವಿಧೆಡೆಗಳಿಂದ ಆಗಮಿಸುವ ಜನತೆಯ ವಾಹನಗಳ ನಿಲುಗಡೆಗೆ ಬಾಕ್ಸೈಟ್ ರಸ್ತೆ, ಶ್ರೀನಗರ , ಮಹಾಂತೇಶ ನಗರ, ಐಸಿಎಂಆರ್ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಪಾರ್ಕಿಂಗ್ ವಿಚಾರವಾಗಿ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ, ತೀರ್ಮಾನಿಸಲಾಗುವುದು ಎಂದು ಹೇಳಿದರು.

ಕೋರೆ ಕೊಡುಗೆ ಅಪಾರ:

ಡಾ.ಪ್ರಭಾಕರ ಕೋರೆ ಅವರು ಶಿಕ್ಷಣ, ಕೃಷಿ, ಸಹಕಾರಿ ವಲಯ, ರಾಜಕೀಯ, ಚಲನಚಿತ್ರ ಉದ್ಯಮ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯಲ್ಲಿ ಕೋರೆಯವರ ಕೊಡುಗೆ ಅಪಾರವಾಗಿದೆ. ಮೂರು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಇದರ ಜೊತೆಗೆ ವಿವಿಧ ಸಂಘ, ಸಂಸ್ಥೆಗಳೊಂದಿಗೆ ಒಡನಾಟಹೊಂದಿದ್ದಾರೆ. ೧೯೮೪ರಿಂದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ ತಜ್ಞರಾಗಿದ್ದಾರೆ. ಅವರ ನಾಯಕತ್ವದಲ್ಲಿ ೩೮ರಷ್ಟಿದ್ದ ಕೆಎಲ್‌ಇ ಸಂಸ್ಥೆಯ ಅಂಗಸಂಸ್ಥೆಗಳು ಇಂದು ೨೯೩ಕ್ಕೆ ವಿಸ್ತರಿಸಿವೆ. ೧೩೮೦೦೦ ವಿದ್ಯಾರ್ಥಿಗಳನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯು ಶಿಕ್ಷಣ, ಆರೋಗ್ಯ ಆರೈಕೆ, ಸಂಶೋಧನೆ ಹಾಗೂ ಕೃಷಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದೆ. ೨೦೦೬ರಲ್ಲಿ ಬೆಳಗಾವಿಯಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಕೆಎಲ್‌ಇ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ೨೦೧೫ರಲ್ಲಿ ಹುಬ್ಬಳ್ಳಿಯಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಬಾನುಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ

ಉತ್ತರ ಕರ್ನಾಟಕದಲ್ಲಿ ೨೪೦೦ ಹಾಸಿಗೆಗಳ ಅತ್ಯಾಧುನಿಕ ಸುಸಜ್ಜಿತ ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸ್ಥಾಪನೆಯೊಂದಿಗೆ ಆರೋಗ್ಯ ಸೇವೆಯಲ್ಲಿ ಕ್ರಾಂತಿಕಾರಕ ಬೆಳವಣಿಗೆಗೆ ಪ್ರಭಾಕರ ಕೋರೆ ಪಾತ್ರರಾಗಿದ್ದಾರೆ. ಅಂಗಾಂಗ ದಾನ ಕೇಂದ್ರವೆಂದು ಮಾನ್ಯತೆ ಪಡೆದಿರುವ ಕೆಎಲ್‌ಇ ಆಸ್ಪತ್ರೆಯು ಪ್ರತಿವರ್ಷ ೭೦ ಸಾವಿರ ಒಳರೋಗಿಗಳಿಗೆ ಹಾಗೂ ೯ ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಆಸ್ಪತ್ರೆಯಲ್ಲಿ ೧೨೦೦ ಹಾಸಿಗೆಗಳನ್ನು ಬಡ ರೋಗಿಗಳಿಗೆ ಸಮರ್ಪಿಸಲಾಗಿದೆ. ಬೆಳಗಾವಿ ಸುತ್ತಮುತ್ತಲಿನ ಜನತೆಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವ ಸದುದ್ದೇಶದಿಂದ ಬೆಳಗಾವಿಯ ಯಳ್ಳೂರು ರಸ್ತೆಯಲ್ಲಿ ೫೦೦ ಹಾಸಿಗೆಗಳ ಅತ್ಯಾಧುನಿಕ ಕೆಎಲ್‌ಇ ಚಾರಿಟೇಬಲ್ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ. ಸಾಂಪ್ರದಾಯಿಕ ಔಷಧದಲ್ಲಿ ಆರೋಗ್ಯಸೇವೆ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಕೆಎಲ್‌ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ.ಬೆಳಗಾವಿಯಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಯನ್ನು ಪ್ರಾರಂಭಿಸಿದ್ದಾರೆ. ಹುಬ್ಬಳ್ಳಿಯ ಕೆಎಲ್‌ಇ ಜಗದ್ಗುರು ಗಂಗಾಧರ ಸ್ವಾಮೀಜಿಯವರು ಮೂರು ಸಾವಿರಮಠದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ. ಹೀಗೆ ಆರೋಗ್ಯ ಸೇವೆ ಮತ್ತು ಸಾಮಾಜಿಕ ಕೊಡುಗೆಗಳನ್ನು ಕೋರೆಯವರು ನೀಡಿದ್ದಾರೆ

ಸಾಧನೆಯ ಶಿಖರಗಳು…

ಹಲವು ಸಂಘ-ಸಂಸ್ಥೆಗಳಿಂದ ಗೌರವ
ಬೆಳಗಾವಿಯ ಕೆಎಲ್‌ಇ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಸತತವಾಗಿ ಎರಡು ಸಲ ಕರ್ನಾಟಕ ವಿಧಾನಮಂಡಲ ಅಧಿವೇಶಗಳನ್ನು ಯಶಸ್ವಿಯಾಗಿ ಸೆಪ್ಟೆಂಬರ್ ೨೦೦೬ ಹಾಗೂ ಜನವರಿ ೨೦೦೯ರಲ್ಲಿ ಆಯೋಜಿಸಿದ್ದಾರೆ. ಬೆಳಗಾವಿಯಲ್ಲಿ ಮಾರ್ಚ್ ೨೦೧೧ರಲ್ಲಿ ಜರುಗಿದ ೨ನೇ ವಿಶ್ವ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬೃಹತ್ ಸಮ್ಮೇಳನವನ್ನು ಖ್ಯಾತ ಉದ್ಯಮಿ ಇನ್ಫೋಸಿಸ್‌ನ ನಾರಾಯಣ ಮೂರ್ತಿ, ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಖ್ಯಾತ ಚಿತ್ರನಟಿ ಐಶ್ವರ್ಯಾ ರೈ ಉದ್ಘಾಟಿಸಿದ್ದರು. ವಿಶ್ವದ ನಾನಾ ಭಾಗಗಳಿಂದ ಪ್ರತಿನಿಧಿಗಳು ಹಾಗೂ ಕನ್ನಡಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಈ ಸಮ್ಮೇಳನ ಯಶಸ್ವಿಗೂ ಕೋರೆ ಶ್ರಮಿಸಿದ್ದರು. ಕೋರೆ ಅವರು ಸಲ್ಲಿಸಿದ ಅನುಪಮ ಸೇವೆಗೆ ಹಲವಾರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿವೆ. ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

Check Also

ಬೆಳಗಾವಿಯ ದಿವ್ಯಾ ಗಾಣಿಗೇರ ರಾಜ್ಯಕ್ಕೆ ಪ್ರಥಮ

ಬೆಂಗಳೂರು-ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.