Breaking News

ಸ್ಯಾಂಡಲ್ ವುಡ್ ಹಿರೋ ಯಶ್ ಪುತ್ರಿಗೆ ಚನ್ನಮ್ಮನ ಕಿತ್ತೂರಿನ ತೊಟ್ಟಿಲು

ಬೆಳಗಾವಿ- ವೀರರಾಣಿ ಚನ್ನಮ್ಮಾಜಿಯ ಕಿತ್ತೂರಿನಿಂದ ಸ್ಯಾಂಡಲ್ ವುಡ್ ಹಿರೋ ಯಶ್ ಪುತ್ರಿಗೆ ತೊಟ್ಟಿಲು ರವಾನೆಯಾಗಿದೆ

ಕಿತ್ತೂರು ಸಂಸ್ಥಾನಮಠದ ಶ್ರೀಗಳ ಸಾನಿದ್ಯದಲ್ಲಿ ಕಿತ್ತೂರಿನ ಯಶ್ ಅಭಿಮಾನಿಯೊಬ್ಬ ತೊಟ್ಟಿಲು ಸಿದ್ಧಪಡಿಸಿ ಯಶ್ ಪುತ್ರಿಗೆ ಈ ತೊಟ್ಟಿಲನ್ನು ರವಾನಿಸಿ ಈ ಅಭಿಮಾನಿ ಈಗ ನಟ ಅಂಬರೀಶ್ ಅವರ ಆಶಯವನ್ನು ಪೂರ್ಣಗೊಳಿಸಿದ್ದಾನೆ ಜೊತೆಗೆ ರಾಜ್ಯದ ಗಮನ ಸೆಳೆದಿದ್ದಾನೆ

ಚನ್ನಮ್ಮನ ಕಿತ್ತೂರು: ಇಲ್ಲಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ಹಾಗೂ ಉದ್ಯಮಿ ನಾರಾಯಣ ಕಲಾಲ ಉಪಸ್ಥಿತಿಯಲ್ಲಿ ಯಶ್-ರಾಧಿಕಾ ದಂಪತಿ ಪುತ್ರಿಗೆ ತೊಟ್ಟಿಲು ಉಡುಗೊರೆಯನ್ನು ಶನಿವಾರ ಸಂಜೆ ಬೀಳ್ಕೊಡಲಾಯಿತು.

ಕಿತ್ತೂರಿನ ಮಹಿಳೆಯರು ‘ತಳಿರು ತೋರಣ ಕಟ್ಟೀರೆ, ಜೋ. ಜೋ ಎನ್ನ ಜ್ಯೋತಿಯ ಕಂದ’ ಎಂದು ಹಾಡಿ ಸಂಭ್ರಮಿಸಿ ವಿಧ್ಯುಕ್ತವಾಗಿ ತೊಟ್ಟಿಲಿಗೆ ಪೂಜೆ ನೆರವೇರಿಸಿ ಬೀಳ್ಕೊಟ್ಟರು.

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಣಿ ಚನ್ನಮ್ಮನ ನೆಲದಿಂದ ಬೆಂಗಳೂರಿನ ಕೆಂಪೇಗೌಡರ ನೆಲಕ್ಕೆ ಈ ತೊಟ್ಟಿಲು ಶ್ರೀಮಠದಿಂದ ಹೊರಟಿದೆ. ಇಲ್ಲಿಯ ಮಣ್ಣಿನ ಮಮತೆ, ಪ್ರೀತಿ, ಸಾಹಸದ ಗುಣಗಳನ್ನು ಮೈಗೂಡಿಸಿಕೊಂಡು ಚನ್ನಮ್ಮನಂತೆ ಯಶ್ ಪುತ್ರಿಯೂ ಬೆಳೆಯಲಿ’ ಎಂದು ಹಾರೈಸಿದರು.

‘ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟದ ಬೆಸುಗೆ ಇಂದಿನ ಕಾರ್ಯಕ್ರಮವಾಗಿದೆ. ಇಲ್ಲಿಯ ಸಂಪ್ರದಾಯ ಆಚರಿಸಿ ತೊಟ್ಟಿಲು ಬೀಳ್ಕೊಡಲಾಗುತ್ತಿದೆ’ ಎಂದರು.

ತೊಟ್ಟಿಲು ನಿರ್ಮಿಸಲು ಕಾರಣರಾದ ನಾರಾಯಣ ಕಲಾಲ ಮಾತನಾಡಿ, ‘ಅಂಬರೀಷ್ ಆಶಯದಂತೆ ಇದನ್ನು ನಿರ್ಮಿಸಿ ಕಳುಹಿಸಿ ಕೊಡಲಾಗುತ್ತಿದೆ. ಅಂಬರೀಷ್ ಇದ್ದಿದ್ದರೆ ಹರ್ಷ ಇಮ್ಮಡಿಸುತ್ತಿತ್ತು. ಉಗ್ರರ ದಾಳಿಗೆ ದೇಶ ಸಿಕ್ಕು ನಲುಗಿದೆ. ಹೀಗಾಗಿ ಈ ಕಾರ್ಯಕ್ರಮವನ್ನು ಸಂಕ್ಷಿಪ್ತಗೊಳಿಸಲಾಗಿದೆ’ ಎಂದೂ ಅವರು ಹೇಳಿದರು.

ತೊಟ್ಟಿಲು ನಿರ್ಮಿಸಿರುವ ಶ್ರೀಧರ ಲಕ್ಷ್ಮಣ ಸಾವುಕಾರ್ ಮಾತನಾಡಿ ‘4 ತಲೆಮಾರುಗಳಿಂದ ತೊಟ್ಟಿಲು ತಯಾರಿಕೆ ಕಸುಬು ಮಾಡುತ್ತಿದ್ದೇವೆ. ಅರಗಿನಿಂದ ಸಿದ್ಧಪಡಿಸಿರುವ ಬಣ್ಣವನ್ನು ಕೇದಗಿಯ ಎಲೆಯಿಂದ ಲೇಪಿಸಲಾಗುತ್ತದೆ. ರಾಸಾಯನಿಕ ಮಿಶ್ರಿತ ಬಣ್ಣವನ್ನು ಬಳಸಲಾಗುವುದಿಲ್ಲ. 23 ಅಂಗುಲ ಎತ್ತರ, 32 ಅಂಗುಲ ಅಗಲದ ತೊಟ್ಟಿಲವನ್ನು ನಿರ್ಮಿಸುತ್ತೇವೆ’ ಎಂದು ಮಾಹಿತಿ ನೀಡಿದರು

.ಮಂಜುನಾಥ್ ಚಂದೂರ್ಕರ ಮೂಲಕ ನಾರಾಯಣ ಕಲಾಲ ಅವರು ನಮ್ಮನ್ನು ಸಂಪರ್ಕಿಸಿದರು. ಮೂರು ತಿಂಗಳ ಹಿಂದೆ ಆರ್ಡರ್ ಪಡೆದು ನಿರ್ಮಿಸಿದ್ದೇವೆ. ಕುಸುರಿ ಕೆಲಸ, ಪೌರಾಣಿಕ ಮತ್ತು ಇತಿಹಾಸದ ಚಿತ್ರಗಳನ್ನು ತೊಟ್ಟಿಲು ಮೇಲೆ ರಚಿಸಲು ಇಷ್ಟು ಸಮಯ ನಮಗೆ ಬೇಕಾಗುತ್ತದೆ’ ಎಂದರು

.ಕಾದಂಬರಿಕಾರ  ಯ. ರು. ಪಾಟೀಲ, ರಾಜೇಶ್ವರಿ ಕುಪ್ಪಸಗೌಡ್ರ, ಮಹಾದೇವಿ ಕುಪ್ಪಸಗೌಡ್ರ, ಕಾವ್ಯಾ ಅಬ್ಬಾಯಿ, ಕುಮಾರಿ ನಂದಿಕೋಲು, ಸವಿತಾ ಕುಪ್ಪಸಗೌಡ್ರ, ಆಶ್ವಿನಿ ಶೆಟ್ಟರ್ ಇತರರು ಇದ್ದರು.

Check Also

ಅವರು ಶುರು ಮಾಡಿದ್ದಾರೆ.ನೀವೂ ಅದನ್ನೇ ಮಾಡೋದು ಒಳ್ಳೆಯದು…!!!

ಬೆಂಗಳೂರು-ಕನ್ನಡ ಉಳಿಯಬೇಕು ಬೆಳೆಯಬೇಕು,ಡಾಕ್ಟರ್ ಬರೆದಿದ್ದು ರೋಗಿಗೆ ತಿಳಿಯಬೇಕು ತಪಾಸಣೆ ಮಾಡಿದ ಬಳಿಕ ಡಾಕ್ಟರ್ ಸಾಹೇಬ್ರು ಔಷಧಿ ಬರೆದು ಕೊಡ್ತಾರೆ ಅದು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.