ಮಹಮ್ಮದ್ ರಫಿ ಸ್ಮರಣೆ
ಭಾರತೀಯರಾದ ನಮ್ಮ ಬದುಕಿನ ಅವಿಭಾಜ್ಯ ಅಂಗ ‘ಸಿನಿಮಾ ಸಂಗೀತ’. ಅಂದಿನ ರೇಡಿಯೋ ನಮಗೆ ನಮ್ಮ ದೇಶದ ಪ್ರಮುಖ ಭಾಷೆಗಳು ಗೊತ್ತಿದ್ದವೋ ಇಲ್ಲವೋ, ಅವುಗಳ ನಾದ ಮಾಧುರ್ಯದಲ್ಲಿ ನಾವು ಜೀವಿಸುವುದನ್ನು ಸಹಜವಾಗಿ ಕಲಿಸಿ ಬಿಟ್ಟಿದ್ದವು. ಅಂದು ಆ ನಾದಲೀಲೆಯಲ್ಲಿ ಮೀಯದೆ, ಬೆಳಗು ರಾತ್ರಿಗಳು ಈ ನಾಡಿನಲ್ಲಿ ಹರಿಯುತಿರಲಿಲ್ಲ. ಒಮ್ಮೊಮ್ಮೆ ಅನಿಸುತ್ತದೆ. ನಮ್ಮ ದೇಶವನ್ನು ಒಂದು ರೀತಿಯಲ್ಲಿ ಅದ್ಭುತವಾಗಿ ಹಿಡಿದಿಟ್ಟಿರುವ ಅನನ್ಯ ಶಕ್ತಿಯಲ್ಲಿ ಸಂಗೀತದ ಪಾತ್ರ ಪ್ರಮುಖವಾದದ್ದು ಎಂದು.
ಈ ಸಿನಿಮಾ ಸಂಗೀತದ ಪ್ರಮುಖ ಮಕುಟ ಪ್ರಾಯರಲ್ಲಿ ಮಹಮ್ಮದ್ ರಫಿ ಅಗ್ರಗಣ್ಯರು. ಅವರು ಹುಟ್ಟಿದ್ದು ಡಿಸೆಂಬರ್ 24, 1924ರಲ್ಲಿ. ಅಮೃತಸರದ ಬಳಿಯ ಹಳ್ಳಿಯೊಂದರಲ್ಲಿ ನೆಲೆಸಿದ್ದ ಕುಟುಂಬಕ್ಕೆ ಸೇರಿದ್ದ ಪುಟ್ಟ ಬಾಲಕ ಮಹಮ್ಮದ್ ರಫಿ ತನ್ನ ಗ್ರಾಮದಲ್ಲಿ ಸುಳಿದಾಡುತ್ತಿದ್ದ ಫಕೀರನೊಬ್ಬ ಹಾಡುವುದನ್ನು ನೋಡಿ ಆತನಂತೆಯೇ ಹಾಡಿ ನಲಿಯುತ್ತಿದ್ದ. ಮುಂದೆ ಆ ಕುಟುಂಬ ಲಾಹೋರಿಗೆ ಹೋದಾಗ ಬಾಲಕ ರಫಿ ಪ್ರಸಿದ್ಧ ಸಂಗೀತಗಾರರಾದ ಬಡೇ ಗುಲಾಮ್ ಅಲಿ ಖಾನ್, ಉಸ್ತಾದ್ ಅಬ್ದುಲ್ ವಾಹಿದ್ ಖಾನ್ ಅವರಿಂದ ಸಂಗೀತ ಪಾಠ ಕಲಿತ. ಕೆ. ಎಲ್ ಸೈಘಲ್ ಅವರ ಸಾರ್ವಜನಿಕ ಸಂಗೀತ ವೇದಿಕೆವೊಂದರಲ್ಲಿ ಹದಿಮೂರು ವರ್ಷದ ಬಾಲಕ ಮಹಮ್ಮದ್ ರಫಿಗೆ ಹಾಡಲು ಒಂದು ಅವಕಾಶ ದೊರಕಿತು. ಮುಂದೆ ರಫಿ ಭಾರತದ ಆಕಾಶವಾಣಿಗೆ ಸೇರಿದ್ದ ಲಾಹೋರಿನ ಆಕಾಶವಾಣಿ ಕೇಂದ್ರದಿಂದ ಗಾಯನಕ್ಕೆ ಆಹ್ವಾನ ಪಡೆದರು. 1941ರಲ್ಲಿ ಶ್ಯಾಮ್ ಸುಂದರ್ ಅವರು ರಫಿಯನ್ನು ಹಿನ್ನಲೆ ಗಾಯಕನನ್ನಾಗಿ ಪರಿಚಯಿಸಿದರು. ಮುಂದೆ ನಲವತ್ತು ವರ್ಷಗಳ ಕಾಲ ಅವರು ಹಾಡಿದ ಗೀತೆಗಳ ಸಂಖ್ಯೆ 26000ಕ್ಕೂ ಹೆಚ್ಚು. ಹಿಂದಿ ಭಾಷೆಯಲ್ಲದೆ ಕನ್ನಡವನ್ನೂ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳಲ್ಲಿ ಅವರ ಗಾನ ಮಾಧುರ್ಯ ಗಂಗೆಯಾಗಿ ಹರಿದಿದೆ. ಇಂಗ್ಲೀಷ್, ಪರ್ಷಿಯ, ಸ್ಪಾನಿಷ್, ಡಚ್ ಭಾಷೆಗಳಲ್ಲಿ ಕೂಡ ಅವರು ಹಾಡಿದ್ದಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ ಮುಂಬೈನಗರಿಯಲ್ಲಿ ತಮ್ಮ ಗಾಯನದಿಂದ ಪ್ರಖ್ಯಾತರಾಗಿದ್ದ ಮಹಮ್ಮದ್ ರಫಿ ತಮ್ಮ ಸ್ಥಳವಾದ ಲಾಹೋರಿಗೆ ಹೋಗದೆ ಭಾರತದಲ್ಲೇ ಇರಲು ನಿರ್ಧರಿಸಿದರು. 1948ರಲ್ಲಿ ಅವರು ಹಾಡಿದ ‘ಸುನೋ ಸುನೋ ಆಯೆ ದುನಿಯಾ ವಾಲೋ ಬಾಪು ಕಿ ಯೇ ಅಮರ್ ಕಹಾನಿ’ ಹಾಡು ದೇಶವಾಸಿಗಳ ದೇಶಭಕ್ತಿಯ ಪ್ರತೀಕವಾಗಿ ಜನತೆಯ ನರನಾಡಿಗಳಲ್ಲಿ ಬೆರೆತು ಹೋದಂತಹ ಅಲೆಯನ್ನು ಸೃಷ್ಟಿಸಿತ್ತು. ಈ ಗೀತೆಯನ್ನು ಅವರಿಂದ ಪ್ರತ್ಯೇಕವಾಗಿ ಕೇಳಬೇಕೆಂದು ಪಂಡಿತ್ ನೆಹರೂ ಅವರು ಮಹಮ್ಮದ್ ರಫಿ ಅವರನ್ನು ತಮ್ಮ ಮನೆಗೇ ಆಹ್ವಾನಿಸಿ ಅವರಿಗೆ ವಿಶೇಷ ಗೌರವ ಸತ್ಕಾರಗಳನ್ನು ಸಲ್ಲಿಸಿ ಅವರ ಬಳಿಯಲ್ಲೇ ಕುಳಿತು ಆ ಗಾನಸುಧೆಯನ್ನು ಆಲಿಸಿದರಂತೆ.
‘ಬೈಜುಭಾವ್ರ’ ಚಿತ್ರದ ‘ಓ ದುನಿಯಾ ರಖ್ ವಾಲೆ’, ‘ಮನ್ ತರ್ಪಿತ್ ಹರಿ ದರ್ಶನ್ ಕೋ ಆಜ್’ ಮುಂತಾದ ಹಾಡುಗಳು ಮಹಮ್ಮದ್ ರಫಿ ಅವರನ್ನು ದೇಶವಾಸಿಗಳ ಹೃದಯಕ್ಕೆ ಇನ್ನಷ್ಟು ಆಪ್ತರನ್ನಾಗಿಸಿತು. ಮುಂದೆ ಓ.ಪಿ. ನಯ್ಯರ್, ಶಂಕರ್ ಜೈ ಕಿಷನ್, ಎಸ್.ಡಿ. ಬರ್ಮನ್, ನೌಷಾದ್ ಅಂತಹ ಸಂಗೀತ ನಿರ್ದೇಶಕರ ಕಣ್ಮಣಿ ಆದರು ರಫಿ. ‘ಪ್ಯಾಸ’, ‘ಕಾಗಜ್ ಕೆ ಫೂಲ್’, ‘ಕೊಹಿನೂರ್’, ‘ತೆರೆ ಘರ್ ಕಿ ಸಾಮನೆ’, ‘ಗೈಡ್’, ‘ಅಭಿಮಾನ್’, ‘ಆರಾಧನ’, ‘ನಯಾ ದೌರ್’, ‘ತುಮ್ಸಾ ನಹಿ ದೇಖಾ’, ‘ಕಾಶ್ಮೀರ್ ಕಿ ಕಲಿ’ ಮುಂತಾದ ಸಿನಿಮಾಗಳಲ್ಲಿ ಅವರ ಹಾಡುಗಳು ಒಂದಕ್ಕಿಂದ ಮತ್ತೊಂದು ಎಂಬಂತೆ ಪ್ರಖ್ಯಾತವಾದವು. ದಿಲೀಪ್ ಕುಮಾರ್ ನಟಿಸಿದ ‘ಮಧುಬನ್ ಮೆ ರಾಧಿಕಾ ನಾಛೆ ರೆ’ ಎಂಬ ‘ಕೊಹಿನೂರ್’ ಚಿತ್ರದ ಹಾಡು 1960ರಲ್ಲಿ ಮೂಡಿ ಬಂದ ಅತ್ಯಂತ ಜನಪ್ರಿಯ ಗೀತೆ.
‘ಚಾದ್ವೀಕ ಚಾಂದ್’ ಅವರಿಗೆ ಪ್ರಥಮ ಫಿಲಂ ಫೇರ್ ಪ್ರಶಸ್ತಿಯನ್ನೂ, ‘ಬಾಬುಲ್ ಕಿ ದುಯೇ ಲೇತಿ ಜಾ’ ರಾಷ್ಟ್ರಪ್ರಶಸ್ತಿಯನ್ನೂ ತಂದುಕೊಟ್ಟಿತು. ‘ತೆರಿ ಪ್ಯಾರಿ ಪ್ಯಾರಿ ಸೂರತ್ ಕೋ’, ‘ಬಾಹಾರೋನ್ ಫೂಲ್ ಬರ್ಸಾವೋ’, ‘ದಿಲ್ ಕೆ ಝರೋಖೆ ಮೇಂ’, ‘ಯಾಹೂ, ಛಾಯೆಕೊಯಿ ಮುಜ್ಹೆ ಜಂಗಲೀ ಕಹೆ’ ಮುಂತಾದ ಹಾಡುಗಳು ಇನ್ನಿಲ್ಲದ ಜನಪ್ರಿಯತೆ, ಪ್ರಶಸ್ತಿಗಳನ್ನು ಬಾಚಿದವು.
ಮುಂದಿನ ತಲೆ ಮಾರಿನ ಮದನ್ ಮೋಹನ್, ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅಂತಹ ಸಂಗೀತ ನಿರ್ದೇಶಕರ ಜೊತೆಯಲ್ಲೂ ರಫಿ ಅವರು ಅಂಥದೇ ಸಾಧನೆಗಳನ್ನು ಮಾಡಿದರು. ‘ಹಮ್ ಇಷ್ಕ್ ಮೇಂ ಬರ್ಬಾದ್ ಹೈ ಬರ್ಬಾದ್ ರಹೇಂಗೇ’, ‘ತೆರಿ ಆಂಖೊಂನ್ ಕೆ ಸಿವಾ’, ‘ಯೇ ದುನಿಯಾ ಯೇಹ್ ಮೆಹಫಿಲ್’, ‘ತುಮ್ ಜೋ ಮಿಲ್ ಗಯೇ ಹೋ’, ‘ಚಾಹೂಂಗಾ ಮೇನ್ ತುಜ್ಹೆ ಸಾಂಜ್ ಸವೇರೆ’ ಹೀಗೆ ಜನಪ್ರಿಯಗೀತೆಗಳ ಮಳೆ ರಫಿ ಅವರ ಧ್ವನಿಯಲ್ಲಿ ಹರಿಯುತ್ತಲೇ ಇತ್ತು. ಎಪ್ಪತ್ತರ ದಶಕದಲ್ಲಿ ಕಿಶೋರ್ ಕುಮಾರ್ ಆಗಮನದಿಂದ ಮತ್ತೊಬ್ಬ ಮಹಾನ್ ಹಾಡುಗಾರನ ಉದಯದಿಂದ ಹಿಂದೀ ಚಿತ್ರರಂಗದಲ್ಲಿ ರಫಿ ಅವರ ಜನಪ್ರಿಯತೆ ಕಿಶೋರ್ ಜೊತೆ ಹಂಚಿಕೊಂಡಿತಾದರೂ ಅವರ ಗಾನ ಸುಧೆಯ ಶ್ರೇಷ್ಠತೆ ಕುಗ್ಗಲಿಲ್ಲ. ‘ತೇರಿ ಗಲಿಯೋಂ ಮೇಂ ನಾ ರಕ್ಹೆಂಗೆ ಕದಮ್ ಆಜ್ ಕೆ ಬಾದ್’, ‘ಕ್ಯಾ ಹುವಾ ತೇರಾ ವಾದ’ ಅಂತಹ ಶ್ರೇಷ್ಠ ಹಾಡುಗಳನ್ನು ಹಾಡುತ್ತಾ ರಫಿ ಮುಂದೆ ಸಾಗಿದರು.
ಕನ್ನಡದಲ್ಲಿ ‘ಒಂದೇ ಬಳ್ಳಿಯ ಹೂಗಳು’ ಚಿತ್ರದ ‘ನೀನೆಲ್ಲಿ ನಡೆವೆ ದೂರ’ ಹಾಡು ಇಂದಿಗೂ ಕನ್ನಡ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೆ ಉಳಿದಿದೆ. ದೂರದರ್ಶನದಲ್ಲಿನ ಸಂದರ್ಶನವೊಂದರಲ್ಲಿ ಈ ಹಾಡನ್ನು ಬರೆದು, ಚಿತ್ರ ನಿರ್ದೇಶಿಸಿದ ದಿವಂಗತ ‘ಗೀತಪ್ರಿಯ’ ಅವರು ರಫಿ ಅವರೊಡನೆ ಆದ ಆ ಅನುಭವವನ್ನು ಬಣ್ಣಿಸಿದ್ದು ಹೀಗೆ. “ಹಾಡನ್ನು ಹಾಡಲು ಒಪ್ಪಿದ ರಫಿ ಅವರು, ಆ ಹಾಡಿನ ಪೂರ್ಣ ಸಾಹಿತ್ಯವನ್ನು ಅರ್ಥೈಸಿ ಪದ ಪದವನ್ನೂ ಅನುಭಾವಿಸಿದ ನಂತರವೇ ಆ ಹಾಡಿನ ಧ್ವನಿಮುದ್ರಣಕ್ಕೆ ಬಂದಿದ್ದು.” ಕನ್ನಡದ ಎಷ್ಟೋ ಹಾಡುಗಳನ್ನು ಹಳೆಯ ಕಾಲದಲ್ಲಿ ಮತ್ತು ಇಂದಿನ ದಿನಗಳಲ್ಲಿ ಹಾಡುಗಾರರು ಹಾಡಿರುವಲ್ಲಿ ಇಂತಹ ನಿಷ್ಠೆ ಕಾಣದಾಗದೆ ಬಹಳಷ್ಟು ಪ್ರಖ್ಯಾತ ಹಾಡುಗಳು ತಪ್ಪು ಉಚ್ಚಾರದಿಂದ ಧ್ವನಿಮುದ್ರಣವಾಗಿರುವ ಬೇಕಾದಷ್ಟು ಉದಾಹರಣೆಗಳಿವೆ. ಇದು ರಫಿ ಅಂತಹ ಗಾಯಕರ ಶ್ರೇಷ್ಠತೆಯ ಹಿಂದಿನ ನಿಷ್ಠೆಯನ್ನು ತೋರುತ್ತದೆ.
ಎಲ್ಲ ಶ್ರೇಷ್ಠತೆಗೂ ಒಂದು ಅಂತ್ಯವೆಂಬಂತೆ 1980ರ ಜುಲೈ 31ರಂದು ರಫಿ ಹೃದಯಾಘಾತದಿಂದ ನಿಧನರಾದರು. ಅವರು ನಿಧನರಾದಾಗ ಇಡೀ ನಾಡು ಎರಡು ದಿನಗಳ ರಜೆ ಘೋಷಿಸಿ ಶೋಕ ಆಚರಿಸಿತು. ಇಡೀ ನಾಡೇ ಗೌರವ ಅರ್ಪಿಸಿತು.
ಈ ಅಮರ ಗಾಯಕ ಹರಿಸಿದ ಗಾನಸುಧೆ, ಅದು ದೇಶದ ಮೂಲೆ ಮೂಲೆಗಳಲ್ಲೂ ಹೃದಯಾಂತರಾಳಗಳನ್ನು ಮೀಟಿದ ಬಗೆ, ಹೃದಯಗಳನ್ನು ಒಂದುಗೂಡಿಸಿದ ಬಗೆ ದೈವೀ ಅನುಗ್ರಹದಂತಹ ಅಪೂರ್ವ ಆಧ್ಯಾತ್ಮ ಶಕ್ತಿಯಿಂದ ಕೂಡಿದ್ದು. ಇಂತಹ ಮಹಾನ್ ಹಾಡುಗಾರ ಅಮರನಾಗದಿರಲು ಹೇಗೆ ತಾನೇ ಸಾಧ್ಯ.
Belagavisuddi.com