ಬೆಳಗಾವಿ
ನಗರದ ಹಳೆ ಪಿಬಿ ರಸ್ತೆಯ ಕಪಿಲೇಶ್ವರ ಮೇಲ್ಸೇತುವೆ ನಿರ್ಮಾಣಕ್ಕೆ ಸೋಮವಾರ ರಸ್ತೆಯನ್ನು ಪಾಲಿಕೆಯಿಂದ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಯಿತು.
ನಗರದ ಕಾಡಾ ಕಚೇರಿಯಲ್ಲಿ ಸಂಸದ ಸುರೇಶ ಅಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಕ್ರಿಯೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಕಂದ್ರಾಬಾದ್‍ನ ಕೆಪಿಆರ್ ಕನ್‍ಸ್ಟ್ರಕ್ಷನ್ಸ್‍ಗೆ ಈಗಾಗಲೇ ಕಾಮಗಾರಿ ನೀಡಲಾಗಿದ್ದು, ಇನ್ನು ಆರು ತಿಂಗಳಲ್ಲಿ ಕೆಲಸ ಮುಗಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣವನ್ನು ವಿಮಾನ ನಿಲ್ದಾಣದ ರೀತಿಯಲ್ಲಿ ಅಭಿವೃದ್ಧಿಪಡಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶೌಚಾಲಯ, ಹೆಚ್ಚುವರಿ ಪ್ಲಾಟ್‍ಫಾರ್ಮ್, ವಿಶ್ರಾಂತಿ ಸ್ಥಳ, ಪಾರ್ಕಿಂಗ್, ವೈಪೈ ಹೀಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಿ ಮಾದರಿ ನಿಲ್ದಾಣವಾಗಿ ರೂಪಿಸುವಂತೆ ತಿಳಿಸಿದ್ದೇನೆ. ಅಲ್ಲದೆ, ಘಟಪ್ರಭಾ ರೈಲ್ವೆ ನಿಲ್ದಾಣ ಅಭಿವೃದ್ಧಿಪಡಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ಮುಂಬೈಗೆ ಮಾತ್ರ ವಿಮಾನ ಹಾರಾಟ ನಡೆಯುತ್ತಿದೆ. ಮುಂಬೈನಲ್ಲಿ ವಿಮಾನಕ್ಕೆ ಟ್ರಾಫಿಕ್ ಸಮಸ್ಯೆ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ದಿಲ್ಲಿ- ಪುಣೆ- ಬೆಳಗಾವಿ- ಬೆಂಗಳೂರು ಹಾಗೂ ಗೋವಾ- ಬೆಳಗಾವಿ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭಿಸಬೇಕು ಎನ್ನುವ ಬಯಕೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ದಂಡು ಮಂಡಳಿಗೆ 50 ಕೋಟಿ ರೂ.
ನಗರದಲ್ಲಿರುವ ದಂಡು ಮಂಡಳಿ ಪ್ರದೇಶದ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ನೀಡಲು ಕೇಂದ್ರ ರಕ್ಷಣಾ ಇಲಾಖೆ ಸಚಿವ ಮನೋಹರ ಪರಿಕ್ಕರ್ ಅವರು ಭರವಸೆ ನೀಡಿದ್ದಾರೆ. ಆ ಅನುದಾನದ ವಿವಿಧ ಸುಧಾರಿತ ಸೌಲಭ್ಯಗಳನ್ನು ಜಾರಿ ಮಾಡಲಾಗುವುದು. ಅನುದಾನಕ್ಕಾಗಿ ಕೇಂದ್ರಕ್ಕೆ ಸಲ್ಲಿಸಿದ ಪ್ರಸ್ತಾವದಲ್ಲಿ ಏನಿದೆ ಎನ್ನುವುದು ತಿಳಿದಿಲ್ಲ. ಆದರೆ, ಆ ಅನುದಾನವನ್ನು ವ್ಯವಸ್ಥಿತಿವಾಗಿ ಬಳಸಲು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಸಂಸದರು ಹೇಳಿದರು.