ರಾಜಕೀಯದಿಂದ ಇನ್ನು ದೂರ…!
ಜಲ ಸಂಪನ್ಮೂಲಕ್ಕೆ ಆದ್ಯತೆ: ಸಚಿವ ರಮೇಶ್
ಬೆಂಗಳೂರು: ರಾಜ್ಯದ ಜಲ ಸಂಪತ್ತನ್ನು ಉಳಿಸಿ ಸಮರ್ಪಕವಾಗಿ ಬಳಸಲು ತಾವು ಬದ್ಧರಾಗಿರುವುದಾಗಿ ಜಲ ಸಂಪನ್ಮೂಲ ಸಚಿವ ರಮೇಶ್ ಲ.ಜಾರಕಿಹೊಳಿ ಹೇಳಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದ ಅವರು, ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ ಅವರು, ತಮಗೆ ಈ ಜವಾಬ್ದಾರಿ ವಹಿಸಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿರುವ ಅವರು, ರಾಜ್ಯದ ಜಲ್ವಂತ ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರಕಟಿಸಿದ್ದಾರೆ.
ಬೃಹತ್ ನೀರಾವರಿ ಸಚಿವರಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಕಾವೇರಿ, ಕೃಷ್ಣ, ಮಹದಾಯಿ ಸೇರಿದಂತೆ ಎಲ್ಲ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವಂತೆ ಶ್ರಮಿಸುವುದಾಗಿ ಹೇಳಿರುವ ಜಾರಕಿಹೊಳಿ ಅವರು, ಆ ಮೂಲಕ ರಾಜ್ಯದ ರೈತರಿಗೆ ವಿಶೇಷವಾಗಿ ಅನುಕೂಲವಾಗುವಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಹೊಸ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಮತ್ತು ಸರ್ವೋಚ್ಛ ನಾಯ್ಯಾಲಯದಲ್ಲಿರುವ ನೀರು ಹಂಚಿಕೆ ಪ್ರಕರಣಗಳ ಬಗ್ಗೆಯೂ ಹೆಚ್ಚಿನ ಗಮನಹರಿಸಲಾಗುವುದು ಎಂದು ನೂತನ ಸಚಿವರು ಹೇಳಿದ್ದಾರೆ.
ರಾಜ್ಯದ ಜನತೆಗೆ ಕುಡಿವ ನೀರು ಒದಗಿಸುವುದು, ಭೂಮಿಗೆ ನೀರುಣಿಸುವುದೂ ಸೇರಿದಂತೆ ಜನರ ಕಣ್ಣಿರು ಒರೆಸುವುದು ತಮ್ಮ ಕರ್ತವ್ಯ ಎಂದು ಭಾವಿಸಿರುವುದಾಗಿ ಸಚಿವ ರಮೇಶ್ ಹೇಳಿದ್ದಾರೆ.
ರಾಜಕೀಯದಿಂದ ದೂರ: ರಾಜ್ಯದ ಜಲ ಸಂಪನ್ಮೂಲ ಇಲಾಖೆ ಪ್ರಮುಖ ಇಲಾಖೆಯಾಗಿದ್ದು, ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಲು ಉದ್ದೇಶಿಸಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅವರು, ಹೀಗಾಗಿ ಅನಗತ್ಯ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದು, ಸಚಿವ ಸ್ಥಾನಕ್ಕೆ ಪೂರ್ಣ ಪ್ರಮಾಣದ ನ್ಯಾಯ ಒದಗಿಸುವುದಾಗಿ ಜಲ ಸಂಪನ್ಮೂಲ ಸಚಿವರು ತಿಳಿಸಿದ್ದಾರೆ.
ರಾಜ್ಯದ ಅತ್ಯಮೂಲ್ಯ ಸಂಪತ್ತಾಗಿರುವ ಜಲ ಸಂಪತ್ತನ್ನು ರಕ್ಷಿಸಲು ಸಾರ್ವಜನಿಕರೂ ಸಹ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಸಚಿವರು ಕೋರಿದ್ದಾರೆ.
