Breaking News
Home / Breaking News / ಕನ್ನಡ ಬೆಳಿಸೋದು,ಉಳಿಸೋದು ಹೇಗೆ ಅಂತಾ ,ಅಧಿಕಾರಿಗಳಿಗೆ ಸಲಹೆ ನೀಡಿದ ನಾಗಾಭರಣ

ಕನ್ನಡ ಬೆಳಿಸೋದು,ಉಳಿಸೋದು ಹೇಗೆ ಅಂತಾ ,ಅಧಿಕಾರಿಗಳಿಗೆ ಸಲಹೆ ನೀಡಿದ ನಾಗಾಭರಣ

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ
ಅಧಿಕಾರಿಗಳು ಕನ್ನಡ ಉಳಿಸಿ, ಬೆಳೆಸುವ ಜವಾಬ್ದಾರಿ ನಿಭಾಯಿಸಬೇಕು: ಡಾ. ಟಿ.ಎಸ್. ನಾಗಾಭರಣ

ಬೆಳಗಾವಿ, -ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹರಿಸಬೇಕು. ಯಾವುದೇ ಮಾಹಿತಿ, ಹಾಗೂ ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು. ಅಧಿಕಾರಿಗಳು ಸರ್ಕಾರಿ ಕೆಲಸ ನಿರ್ವಹಣೆಯ ಜೊತೆಗೆ ಕನ್ನಡವನ್ನು ಬೆಳೆಸಲು ನಿರಂತರ ಶ್ರಮಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಟಿ.ಎಸ್.ನಾಗಾಭರಣ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜು.18) ನಡೆದ ಕನ್ನಡ ಅನುಷ್ಠಾನದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರಿಗೆ ಕನ್ನಡದಲ್ಲಿ ಸುಲಭವಾಗಿ ಮಾಹಿತಿ ಸಿಗುವಂತೆ ಇಲಾಖೆಯ ಜಾಲತಾಣಗಳು ಕನ್ನಡಲ್ಲಿ ಇರಬೇಕು. ಸರ್ಕಾರಿ ಇಲಾಖೆಯ ವೆಬ್ ಸೈಟ್ ಗಳಲ್ಲಿ ಸಂಬಂಧಿಸಿದ ಇಲಾಖೆಯ ಲೋಗೋ ಕಡ್ಡಾಯವಾಗಿರಬೇಕು. 30 ದಿನಗಳ ಒಳಗಾಗಿ ಬಾಕಿ ಇರುವ ವೆಬ್ ಸೈಟ್ ಕನ್ನಡದಲ್ಲಿ ಚಾಲನೆ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿಕ್ಷಣ, ಕಚೇರಿ ವ್ಯವಹಾರಗಳು, ಪತ್ರ ವ್ಯವಹಾರಗಳು ಎಲ್ಲವೂ ಕನ್ನಡದಲ್ಲಿಯೇ ಇರಬೇಕು. ಕನ್ನಡ ಪ್ರಥಮ ಭಾಷೆಯಾಗಿ ಅಥವಾ ಐಚ್ಛಿಕ ಭಾಷೆಯಾಗಿ ಶಿಕ್ಷಣ ನೀಡಬೇಕು ಹಾಗೂ ಪ್ರತಿ ಖಾಸಗಿ ಶಾಲೆಯಲ್ಲಿ ಮಾಧ್ಯಮವಾಗಿ ಅಥವಾ ಪಠ್ಯಗಳಲ್ಲಿ ಒಂದು ಭಾಷೆಯಾಗಿ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ರಸ್ತೆ, ಉದ್ಯಾನವನಗಳಿಗೆ ಕನ್ನಡದ ಗಣ್ಯರ ಹೆಸರು ನಾಮಕರಣ:

ಜಿಲ್ಲೆಯಲ್ಲಿನ ಉದ್ಯಾನವನ, ರಸ್ತೆಗಳಿಗೆ ಪೌರಾಡಳಿತ ನಿರ್ದೇಶನದ ಅನ್ವಯ, ಕನ್ನಡದ ಗಣ್ಯ ವ್ಯಕ್ತಿಗಳು ಹೆಸರು ನಾಮಕರಣ ಮಾಡಬೇಕು ಹಾಗೂ ಅವರ ಮಾಹಿತಿ, ಸಾಧನೆಗಳನ್ನು ಫಲಕಗಳಲ್ಲಿ ಅಳವಡಿಸಬೇಕು,
ಜಿಲ್ಲೆಯಲ್ಲಿ ಭಾಷಾ ಬೆಳವಣಿಗೆಗೆ ಎಲ್ಲ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕನ್ನಡ ಫಲಕಗಳ ಅಳವಡಿಕೆಗೆ ಸೂಚನೆ:

ನಗರದ ಎಲ್ಲಾ ಪ್ರಸಿದ್ದ ಹೋಟೆಲ್ ಗಳು, ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳ ಫಲಕಗಳನ್ನು ಕನ್ನಡದಲ್ಲಿ ಅಳವಡಿಸಬೇಕು. ಜಿಲ್ಲೆಯ ಅಂಗಡಿ ಮುಗ್ಗಟ್ಟುಗಳು ನಾಮಫಲಕ ಕನ್ನಡದಲ್ಲಿ ಅಳವಡಿಸುವಂತೆ 15 ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡ ಫಲಕ ಅಳವಡಿಸದ ಅಂಗಡಿ ಮುಂಗಟ್ಟುಗಳ ಲೈಸೆನ್ಸ್ ರದ್ದುಗೊಳಿಸಬೇಕು. ನಗರ ಸಭೆ ಹಾಗೂ ಪುರ ಸಭೆಯ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳ ಫಲಕಗಳು ಕನ್ನಡದಲ್ಲಿ ಇರುವಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಅಂಗಡಿ ಲೈಸೆನ್ಸ್ ನವೀಕರಣ, ಸಂದರ್ಭದಲ್ಲಿ ಕನ್ನಡ ಫಲಕಗಳ ಅಳವಡಿಕೆ ಮಾಡದ ಅಂಗಡಿ ಮುಂಗಟ್ಟುಗಳ ಲೈಸೆನ್ಸ್ ನವೀಕರಣ ತಡೆ ಹಿಡಿಯಬೇಕು. ಅದೇ ರೀತಿ ಕಿತ್ತೂರು ನಿಂದ ನಿಪ್ಪಾಣಿ ವರೆಗೂ ರಾಜ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಡದಲ್ಲಿ ಫಲಕಗಳಿಲ್ಲ ಈ ಕುರಿತು ಅನೇಕ ದೂರುಗಳು ಬಂದಿವೆ. ತಕ್ಷಣ ಕನ್ನಡ ಫಲಕ ಅಳವಡಿಕೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಸರ್ಕಾರಿ ಇಲಾಖೆಯ ಜಾಲತಾಣಗಳಲ್ಲಿ ಕನ್ನಡದಲ್ಲಿ ಮಾಹಿತಿ:

ಲೋಕೋಪಯೋಗಿ ಇಲಾಖೆಯ ಇ- ಟೆಂಡರ್ ನಲ್ಲಿ ಆಂಗ್ಲ ಹಾಗೂ ಕನ್ನಡ ಭಾಷೆ ಟೆಂಡರ್ ಆಹ್ವಾನ ಬಳಕೆಯಲ್ಲಿದೆ. ಇಲಾಖೆಯ ಜಾಲತಾಣಗಳಲ್ಲಿ ಕನ್ನಡ ಭಾಷೆ ಮೂಲ ಭಾಷೆಯಾಗಿ ಬಳಕೆ ಆಗಬೇಕು. ಅದರಂತೆ
ಜಿಲ್ಲೆಯಲ್ಲಿ ನಡೆಯುವ ಕೆ.ಡಿ.ಪಿ ಸಭೆಯಲ್ಲಿ ಕನ್ನಡ ಬಳಕೆಯಲ್ಲಿ ಇರಬೇಕು ಹಾಗೂ ಸಭೆ ನಡವಳಿಗಳನ್ನು ಕನ್ನಡಲ್ಲಿ ನೀಡಬೇಕು ಎಂದು ಹೇಳಿದರು.

ಅಧಿಕಾರಿಗಳು ಹೃದಯದ ಮೊದಲ ಭಾಗದಲ್ಲಿ ಕನ್ನಡಾಭಿಮಾನ ಹೊಂದಬೇಕು. ಕನ್ನಡ ಭಾಷೆ ಬೆಳೆಸುವುದರ ಜೊತೆಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಾಗಾಭರಣ ತಿಳಿಸಿದರು.

ಪೊಲೀಸ್ ಇಲಾಖೆಯ ಪದೆಗಳ ನೇಮಕಾತಿ ಪತ್ರ, ಎಫ್.ಐ.ಆರ್ ಪ್ರತಿ, ಕವಾಯತು ಆದೇಶ, ಪೊಲೀಸ್ ಠಾಣೆ ಫಲಕ ಎಲ್ಲವೂ ಕನ್ನಡದಲ್ಲೇ ಇವೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹನಿಂಗ ನಂದಗಾಂವಿ ಅವರು ವಿವರಿಸಿದರು.

ಬ್ಯಾಂಕ್ ನಮೂನೆಗಳಲ್ಲಿ ಕನ್ನಡ ಬಳಕೆ:

ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳಲ್ಲಿ, ಅರ್ಜಿ ನಮೂನೆ, ಹಣ ವರ್ಗಾವಣೆ, ಜಮೆ, ಚಲನ್, ರಸೀದಿ ಕನ್ನಡಲ್ಲಿ ಇರಬೇಕು ಮತ್ತು ಗ್ರಾಹಕರ ಜೊತೆಗೆ ಬ್ಯಾಂಕ್ ಸಿಬ್ಬಂದಿಗಳು ಕನ್ನಡಲ್ಲೇ ವ್ಯವಹರಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಟಿ.ಎಸ್. ನಾಗಾಭರಣ ನಿರ್ದೇಶನ ನೀಡಿದರು.

ರಾಜ್ಯ ಸರ್ಕಾರದ ಆದೇಶದ ಅನ್ವಯ ಬಸ್ ಗಳ ಮೇಲೆ ಕಿತ್ತೂರು ಕರ್ನಾಟಕ ನಾಮಕರಣದ ಕುರಿತು ಪೋಸ್ಟರ್ ಗಳನ್ನು ಅಳವಡಿಸಬೇಕು. ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣಗಳಲ್ಲಿ ಜನರು ಓದುವ ಮಾದರಿಯಲ್ಲಿ ಕನ್ನಡ ಕವಿ ವಾಣಿಗಳನ್ನು ಹಾಕಬೇಕು ಎಂದು ಹೇಳಿದರು.

ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡ ಶಿಕ್ಷಕರ ಆಯ್ಕೆ:

ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು. ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಪಡೆದು ತೇರ್ಗಡೆಯಾಗಿರುವ ಅಭ್ಯರ್ಥಿಗಳನ್ನು ಅಂಗನವಾಡಿ ಶಿಕ್ಷಕರ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಸಂತೋಷ ಹಾನಗಲ್, ಅಪರ ಕಾರ್ಯದರ್ಶಿ ಮಹೇಶ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿ.ಸಿ.ಪಿ ರವೀಂದ್ರ ಗಡಾದಿ, ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಈಶ್ವರ ಉಳ್ಳಾಗಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *