Breaking News
Home / Breaking News / ಫುಟ್ ಪಾತ್ ಅತಿಕ್ರಮಣ ತೆರವುಗೊಳಿಸಲು ಬೆಳಗಾವಿ ಡಿಸಿಯಿಂದ ಖಡಕ್ ಆರ್ಡರ್…

ಫುಟ್ ಪಾತ್ ಅತಿಕ್ರಮಣ ತೆರವುಗೊಳಿಸಲು ಬೆಳಗಾವಿ ಡಿಸಿಯಿಂದ ಖಡಕ್ ಆರ್ಡರ್…

ಬೆಳಗಾವಿ, -ಫುಟ್ ಪಾತ್ ಅತಿಕ್ರಮಣ ತೆರವುಗೊಳಿಸುವುದರ ಜತೆಗೆ ನಗರ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಬೇಕು. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ದೂರುಗಳನ್ನು 24 ಗಂಟೆಗಳಲ್ಲಿ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ನಿತೇಶ್ ಪಾಟೀಲ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ‌ ಕಚೇರಿಗೆ ಗುರುವಾರ(ಜೂ.2) ಭೇಟಿ ನೀಡಿ ವಿವಿಧ ವಿಭಾಗಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದ ಬಳಿಕ ಅಧಿಕಾರಿಗಳ ಸಭೆ ನಡೆಸಿದರು.

ಕೆಲವು ಪ್ರಮುಖ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಪಾದಚಾರಿ ಮಾರ್ಗ(ಫುಟ್ ಪಾತ್) ಒತ್ತುವರಿ ಮಾಡಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಆದ್ದರಿಂದ ಕೂಡಲೇ ಫುಟ್ ಪಾತ್ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

ಕುಡಿಯುವ ನೀರು ಸಮಸ್ಯೆಗೆ ತಕ್ಷಣ ಸ್ಪಂದಿಸಿ:

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ‌‌ ಯಾವುದೇ ದೂರುಗಳು ಬಂದರೆ 24 ಗಂಟೆಗಳಲ್ಲಿ ಪರಿಹರಿಸುವ ಕೆಲಸವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ನಿರ್ದೇಶನ ನೀಡಿದರು.
ಮಳೆಗಾಲ ಆರಂಭಗೊಳ್ಳುತ್ತಿರುವುದರಿಂದ ಒಳಚರಂಡಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಪ್ರಮುಖ ರಸ್ತೆಗಳು ಹಾಗೂ ಜನವಸತಿ ಬಡಾವಣೆಗಳ ಅಕ್ಕಪಕ್ಕದಲ್ಲಿರುವ ನಾಲಾಗಳನ್ನು ಆಗಾಗ ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು.

ಇ-ಆಸ್ತಿ ತಂತ್ರಾಂಶ ಮೂಲಕ ದಾಖಲೆ‌ ಒದಗಿಸಲು ಸೂಚನೆ:

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ದಾಖಲೆಗಳನ್ನು ಸಿದ್ಧಪಡಿಸಿ “ಇ-ಆಸ್ತಿ” ತಂತ್ರಾಂಶ ಮೂಲಕ ಸಾರ್ವಜನಿಕರು ಸುಲಭವಾಗಿ ಪಡೆಯಲು ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು.

ಅದೇ ಕಟ್ಟಡ ಪರವಾನಿಗೆಗೆ ಸಂಬಂಧಿಸಿದ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ವಿನಾಕಾರಣ ವಿಳಂಬ ಧೋರಣೆ‌ ಅನುಸರಿಸಬಾರದು ಎಂದು‌ ಎಚ್ಚರಿಕೆ ನೀಡಿದರು.

ತೆರಿಗೆ ಸಂಗ್ರಹ ಹೆಚ್ಚಿಸಲು ಸಲಹೆ:

ಮಹಾನಗರ ಪಾಲಿಕೆಯು ಪ್ರಸಕ್ತ ವರ್ಷದಲ್ಲಿ ಇದುವರೆಗೆ ಶೇ.48 ರಷ್ಟು ತೆರಿಗೆಯನ್ನು ಸಂಗ್ರಹಿಸಿದೆ.‌ ಇನ್ನುಳಿದ ತೆರಿಗೆಯನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅದೇ ರೀತಿ ಪಾಲಿಕೆಯ ಆಸ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು‌ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಅವರು, ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಸೇರಿದಂತೆ ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ‌ಪಾಲಿಕೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿದರು.

ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಹಾನಗರ ಪಾಲಿಕೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಉದ್ಯಾನವನದ ಸೌಂದರ್ಯೀಕರಣಕ್ಕೆ ಚಾಲನೆ ನೀಡಿದರು.

ಪಾಲಿಕೆಯ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಸೇರಿದಂತೆ ಪಾಲಿಕೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರಕ್ಕೆ ಭೇಟಿ:

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಾಗರಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಕಾರ್ಯಚಟುವಟಿಕೆಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪರಿಶೀಲಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ಇರುವ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಗೆ ಗುರುವಾರ ಭೇಟಿ ನೀಡಿದ ಅವರು, ಕೇಂದ್ರದ ಪ್ರತಿಯೊಂದು ಕೆಲಸಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಸಂಚಾರ ನಿರ್ವಹಣೆ, ಬಸ್ ಸಂಚಾರ ಮಾಹಿತಿ, ಭದ್ರತಾ ನಿಗಾ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳ ಚರ್ಚೆ ನಡೆಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ “ಮೈ ಬೆಳಗಾವಿ” ಆ್ಯಪ್ ಸೇವೆಯನ್ನು ಇನ್ನಷ್ಟು ಉತ್ತಮಪಡಿಸುವ ಬಗ್ಗೆ ಸಲಹೆ ನೀಡಿದರು.
ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಮತ್ತಿತರರು ಉಪಸ್ಥಿತರಿದ್ದರು.
****

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *