Breaking News
Home / Uncategorized / ಬರಿಗಾಲಿನಲ್ಲಿ ಸಂಚರಿಸಿದ ಬೆಳಗಾವಿ ಜಿಲ್ಲಾಧಿಕಾರಿ…!!!

ಬರಿಗಾಲಿನಲ್ಲಿ ಸಂಚರಿಸಿದ ಬೆಳಗಾವಿ ಜಿಲ್ಲಾಧಿಕಾರಿ…!!!

ಅತಿವೃಷ್ಟಿ ಹಾನಿ ಪರಿಶೀಲನೆ- 24 ಗಂಟೆಗಳಲ್ಲಿ ಪರಿಹಾರ ವಿತರಣೆಗೆ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, ಆ.8(ಕರ್ನಾಟಕ ವಾರ್ತೆ): ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಳೆಯ ನಡುವೆಯೂ ನಗರದ ವಿವಿಧ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ಕೈಗೊಂಡು ಹಾನಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನೀರು ನುಗ್ಗಿದ ಮನೆಗಳಿಗೆ 24 ಗಂಟೆಗಳಲ್ಲಿ ತಲಾ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಯಳ್ಳೂರ ರಸ್ತೆಯ ಕೇಶವ ನಗರ, ಭಾರತ ನಗರ, ಅನಗೋಳದ ರಘುನಾಥ ಪೇಟ ಮತ್ತಿತರ ಕಡೆಗಳಲ್ಲಿ ಸಂಚರಿಸಿದ ಅವರು, ಯಾವುದೇ ಕಾರಕ್ಕೂ ಪರಿಹಾರ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಳೆಯ ಮನೆಗಳು ಕುಸಿಯುವ ಸಂಭವವಿದ್ದರೆ ಅಂತಹ ಮನೆಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಜನರನ್ನು ಸ್ಥಳಾಂತರಿಸಬೇಕು ಎಂದು ಅಧಿಕಾರಗಳಿಗೆ ತಿಳಿಸಿದರು.

ಯಳ್ಳೂರ ರಸ್ತೆಯ ಕೇಶವ ನಗರದಲ್ಲಿರುವ ಅನ್ನಪೂರ್ಣೇಶ್ವರಿ ಮಂಗಲ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರ ಸ್ಥಾಪನೆ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, “ಅತಿವೃಷ್ಟಿಯಿಂದ ನಗರದಲ್ಲಿ 10 ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 4 ಮನೆಗಳು‌ ಸಂಪೂರ್ಣವಾಗಿ ಕುಸಿದಿವೆ. ನೀರು ನುಗ್ಗಿರುವ ಮನೆಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.

ಅದೇ ರೀತಿ ಮನೆ ಸಂಪೂರ್ಣವಾಗಿ ಕುಸಿದಿರುವುದನ್ನು ಪರಿಶೀಲಿಸಿ 48 ಗಂಟೆಗಳಲ್ಲಿ ಪರಿಹಾರ ನೀಡಲಾಗುವುದು. ಈ ನಿಟ್ಟಿನಲ್ಲಿ ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಿ, ದಾಖಲೆಗಳನ್ನು ಆಧರಿಸಿ ಪರಿಹಾರ ನೀಡಲಾಗುತ್ತದೆ ಎಂದರು.

ಬಳ್ಳಾರಿ ನಾಲಾ ಸಮಸ್ಯೆ-ಶಾಶ್ವತ ಪರಿಹಾರಕ್ಕೆ ಸಭೆ:

ಬಳ್ಳಾರಿ ನಾಲಾದಿಂದ ನಗರದಲ್ಲಿ ಪ್ರತಿವರ್ಷ ಸಮಸ್ಯೆ ಎದುರಾಗುತ್ತಿರುವುದರಿಂದ ಇದಕ್ಜೆ ಶಾಶ್ವತ ಪರಿಹಾರ ಕಂಡುಹಿಡಿಯಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸದ್ಯದಲ್ಲೇ ಸಭೆಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಸದ್ಯಕ್ಕೆ ತಾತ್ಕಾಲಿಕವಾಗಿ ಸಮಸ್ಯೆ ನಿವಾರಿಸಲು ಐದು ಕೋಟಿ‌ ರೂಪಾಯಿ ವೆಚ್ಚದಲ್ಲಿ ಡ್ರೈನೇಜ್ ಕಾಮಗಾರಿಯನ್ನು ತೆಗೆದುಕೊಳ್ಳಲಾಗುವುದು.
ಬಳ್ಳಾರಿ ನಾಲಾ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದರು.

ಬರಿಗಾಲಿನಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ!:

ಯಳ್ಳೂರ ರಸ್ತೆಯ ಕೇಶವ ನಗರದಲ್ಲಿ ಮಳೆಯಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಕೆಲವೆಡೆ ಬರಿಗಾಲಿನಲ್ಲೆ ತೆರಳಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಗಟಾರು ಸಮಸ್ಯೆಗಳನ್ನು ಪರಿಶೀಲಿಸಿದರು.

ಭಾರತ ನಗರದಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದಿರುವ ಮನೆಯನ್ನು ಪರಿಶೀಲಿಸಿದ ಅವರು, ಹಾನಿಯ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಅಕ್ಕಪಕ್ಕದ ಮನೆಗಳ ಗೋಡೆ ಕುಸಿದಿರುವುದರಿಂದ ಯಾವುದೇ ಕ್ಷಣ ಮನೆಗಳು ಕುಸಿಯುವ ಸಾಧ್ಯತೆ ಇರುವುದರಿಂದ ಕೂಡಲೇ ಪರಿಹಾರವನ್ನು ನೀಡಬೇಕು. ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಮನೆಯನ್ನು ಕಳೆದುಕೊಂಡಿರುವ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಹಾನಿಯನ್ನು ಪರಿಶೀಲಿಸಿ ನಿಯಮಾವಳಿ ಪ್ರಕಾರ ತಕ್ಷಣವೇ ಪರಿಹಾರವನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಖಲೆಗಳನ್ನು ಪರಿಶೀಲಿಸಿ ಕೂಡಲೇ ಪರಿಹಾರ ಆರ್.ಟಿ.ಜಿ.ಎಸ್.‌ಮಾಡಲು ತಹಶೀಲ್ದಾರರಿಗೆ ಸೂಚನೆ. ಕೆಲವೇ ಗಂಟೆಗಳಲ್ಲಿ ಪರಿಹಾರ ಒದಗಿಸಲು ನಿರ್ದೇಶನ ನೀಡಿದರು.

ಮನೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಓಮ್ನಿ ವಾಹನ ಸಂಪೂರ್ಣ ಜಖಂ ಗೊಂಡಿರುವುದರಿಂದ ಪರಿಹಾರ ನೀಡಲು ವಾಹನದ ಮಾಲೀಕರು ಮನವಿ ಮಾಡಿಕೊಂಡರು.
ದಾಖಲೆಗಳನ್ನು ಒದಗಿಸಿದರೆ ಅದಕ್ಕೂ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭೇಟಿಯ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಕಸದರಾಶಿ ಹಾಗೂ ಗಟಾರುಗಳನ್ನು ಲೆಕ್ಕಿಸದೇ ಕೆಲವೆಡೆ ಬರಿಗಾಲಿನಲ್ಲಿಯೇ ಸಂಚರಿಸಿದ ಜಿಲ್ಲಾಧಿಕಾರಿಗಳು, ಮನೆ ಶಿಥಿಲಗೊಂಡಿದ್ದರೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಗೊಳ್ಳಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡರು.

ಅನಗೋಳದ ರಘುನಾಥ ಪೇಟದಲ್ಲಿ ಮನೆಯ ಗೋಡೆ ಕುಸಿದಿರುವುದನ್ನು ವೀಕ್ಷಿಸಿದರು.
ಈ ಬಗ್ಗೆ ಕುಟುಂಬದ ಸದಸ್ಯರ ಜತೆ ಚರ್ಚೆ ನಡೆಸಿದ ಅವರು, ತಕ್ಷಣವೇ ಮನೆಯನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು.
ಹಾನಿಗೊಳಗಾಗಿರುವುದರಿಂದ ಇಂದೇ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಆದ್ದರಿಂದ ಕೂಡಲೇ ಸ್ಥಳಾಂತರಗೊಳ್ಳಬೇಕು. ಒಂದು ವೇಳೆ ಬಾಡಿಗೆದಾರರಿದ್ದರೇ ಅವರನ್ನು ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾನಿಗೊಳಗಾದ ಮನೆಯಲ್ಲಿ ಬಾಡಿಗೆದಾರರಿದ್ದರೆ ನಿಯಮಾವಳಿ ಪ್ರಕಾರ ಅವರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಯಳ್ಳೂರ ರಸ್ತೆಯ ಕೇಶವ ನಗರದಲ್ಲಿ ಸಮಸ್ಯೆಯನ್ನು ವಿವರಿಸಿದ ಪಾಲಿಕೆಯ ಸದಸ್ಯರಾದ ಸರಿತಾ ಪಾಟೀಲ ಅವರು, ಬಡಾವಣೆಯಲ್ಲಿ ಗಟಾರು ಇಲ್ಲದಿರುವುದರಿಂದ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ‌ಇದರಿಂದ ಸಮಸ್ಯೆ ಉದ್ಭವಿಸುತ್ತಿದೆ” ಎಂದು ತಿಳಿಸಿದರು.
ವಡಗಾವಿಯ ಅನ್ನಪೂರ್ಣೇಶ್ವರಿ ಮಂಗಲ‌ ಕಾರ್ಯಾಲಯವನ್ನು ಕಾಳಜಿ ಕೇಂದ್ರವಾಗಿ ಸ್ಥಾಪಿಸುವ ಕುರಿತು ಪಾಲಿಕೆಯ ಅಧಿಕಾರಿಗಳ ಜತೆ ಚರ್ಚಿಸಿದರು.

ಅತಿವೃಷ್ಟಿಯಿಂದ ಬೆಳೆಹಾನಿ-ಶೀಘ್ರ ಪರಿಹಾರ:

ಕೃಷ್ಣಾ ಹಾಗೂ ಮಲಪ್ರಭಾ ನದಿಪಾತ್ರದಲ್ಲಿ ಸದ್ಯಕ್ಜೆ ಪ್ರವಾಹ ಪರಿಸ್ಥಿತಿ ಇರುವುದಿಲ್ಲ. ಆದಾಗ್ಯೂ ಕೆಲವು ಕಡೆಗಳಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿದ್ದು, ಆದಷ್ಟು ಬೇಗನೇ ಸಮೀಕ್ಷೆ ಕೈಗೊಂಡು ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಒಟ್ಟಾರೆ 388 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಅದೇ ರೀತಿ ಪಾಲಿಕೆಯ ವ್ಯಾಪ್ತಿಯಲ್ಲಿ ಸದ್ಯಕ್ಕೆ ಒಂದು ಕಾಳಜಿ ಕೇಂದ್ರವನ್ನು ಗುರುತಿಸಲಾಗಿದೆ. ಪರಿಸ್ಥಿತಿ ಆಧರಿಸಿ ಹೆಚ್ಚುವರಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪರಿಸ್ಥಿತಿಯನ್ನು ಆಧರಿಸಿ ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ತೀರ್ಮಾನಿಸಲಾಗುವುದು. ಸದ್ಯಕ್ಜೆ ಯಲ್ಲೋ ಅಲರ್ಟ್ ಇರುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ವಿವರಿಸಿದರು.

ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಅವರು, ನಗರದ ವ್ಯಾಪ್ತಿಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿಯನ್ನು ನೀಡಿದರು.
ತಹಶೀಲ್ದಾರ ಆರ್.ಕೆ.ಕುಲಕರ್ಣಿ, ಪಾಲಿಕೆಯ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
***

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *