ಬೆಂಗಳೂರು: ಕೊಡಿಗೇಹಳ್ಳಿ ಸಮೀಪದ ಬ್ಯಾಟರಾಯನಪುರದಲ್ಲಿ ದುಷ್ಕರ್ಮಿಗಳು ಹಿರಿಯ ದಂಪತಿಯನ್ನು ಕತ್ತು ಸೀಳಿ ಕೊಲೆಗೈದಿದ್ದು, ಮಂಗಳವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ದೇವನಹಳ್ಳಿ ಸಮೀಪದ ಎಲೆಕೆರೆ ಗ್ರಾಮದ ಮುನಿಯಪ್ಪ (68) ಹಾಗೂ ವರಲಕ್ಷ್ಮಿ (60) ಕೊಲೆಯಾದವರು.
‘ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮಂಗಳವಾರ ಸಂಜೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ‘60 ತಾಸುಗಳ ಹಿಂದೆ ದಂಪತಿಯ ಪ್ರಾಣ ಹೋಗಿದೆ’ ಎಂದು ಹೇಳಿದ್ದಾರೆ. ಅಂದರೆ, ಭಾನುವಾರ ಬೆಳಗಿನ ಜಾವ ಅವರ ಕೊಲೆ ನಡೆದಿರುವ ಸಾಧ್ಯತೆ ಇದೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೆಬ್ಬಾಳದ ಜಿಕೆವಿಕೆಯಲ್ಲಿ ಸಹಾಯಕ ನಿಯಂತ್ರಣಾಧಿಕಾರಿಯಾಗಿದ್ದ ಮುನಿಯಪ್ಪ, 2006ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಮೊದಲು ದೇವನಹಳ್ಳಿಯಲ್ಲಿ ನೆಲೆಸಿದ್ದ ಈ ಕುಟುಂಬ, 15 ವರ್ಷಗಳ ಹಿಂದೆ ಬ್ಯಾಟರಾಯನಪುರ ಸಮೀಪದ ವಿವೇಕನಗರಕ್ಕೆ ವಾಸ್ತವ್ಯ ಬದಲಿಸಿತ್ತು. ಆರಂಭದಲ್ಲಿ ಬಾಡಿಗೆ ಮನೆಯಲ್ಲಿದ್ದ ಇವರು, 2002ರಲ್ಲಿ ಡುಪ್ಲೆಕ್ಸ್ ಮನೆ ಕಟ್ಟಿಕೊಂಡಿದ್ದರು’.
‘ದಂಪತಿಯ ಮೊದಲ ಮಗ ನಾಗೇಶ್, ಪತ್ನಿ–ಮಕ್ಕಳ ಜತೆ ಎಲೆಕ್ಟ್ರಾನಿಕ್‌ಸಿಟಿಯಲ್ಲಿ ನೆಲೆಸಿದ್ದಾರೆ. ದ್ವಿತೀಯ ಪುತ್ರ ನಂದೀಶ್ ಅವರ ಪರಿವಾರ ವಿದ್ಯಾರಣ್ಯಪುರದಲ್ಲಿದೆ. ಮೂರನೇ ಮಗ ಪೃಥ್ವಿರಾಜ್ ಅವರು ವಿಶಾಖಪಟ್ಟಣದಲ್ಲಿ ವಾಸವಾಗಿದ್ದಾರೆ. ಹೀಗಾಗಿ, ಮುನಿಯಪ್ಪ ಹಾಗೂ ವರಲಕ್ಷ್ಮಿ ಮಾತ್ರ ಮನೆಯಲ್ಲಿದ್ದರು’.
‘ಮುಂಬಾಗಿಲ ಮೂಲಕವೇ ಒಳಗೆ ಬಂದಿರುವ ಹಂತಕರು, ನೆಲಮಹಡಿಯಲ್ಲಿ ಮುನಿಯಪ್ಪ ಅವರ ಕುತ್ತಿಗೆ ಸೀಳಿದ್ದಾರೆ. ನಂತರ ಮೆಟ್ಟಿಲುಗಳ ಮೂಲಕ ಮಹಡಿಗೆ ಹೋಗಿ, ಕೋಣೆಯಲ್ಲಿ ಮಲಗಿದ್ದ ವರಲಕ್ಷ್ಮಿ ಅವರ ಕತ್ತನ್ನೂ ಸೀಳಿದ್ದಾರೆ. ಬಳಿಕ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಸ್ವಯಂ ಚಾಲಿತ ಲಾಕರ್ ವ್ಯವಸ್ಥೆ ಇದ್ದ ಕಾರಣ, ಬಾಗಿಲು ಬಂದ್ ಆಗಿದೆ’.
‘ಭಾನುವಾರ ಮಧ್ಯಾಹ್ನವಾದರೂ ದಂಪತಿ ಹೊರಗೆ ಬಾರದಿದ್ದಾಗ, ಅವರು ಮಕ್ಕಳ ಮನೆಗೆ ಹೋಗಿರಬಹುದೆಂದು ಸ್ಥಳೀಯರು ಭಾವಿಸಿದ್ದಾರೆ. ಎರಡು ದಿನ ಕಳೆದರೂ, ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಅವರು, ಮಂಗಳವಾರ ಬೆಳಿಗ್ಗೆ ಹಿರಿಯ ಮಗ ನಾಗೇಶ್‌ಗೆ ಕರೆ ಮಾಡಿ ಹೇಳಿದ್ದಾರೆ. ಪೋಷಕರ ಮೊಬೈಲ್‌ಗಳೂ ಸ್ವಿಚ್ ಆಫ್ ಆಗಿದ್ದರಿಂದ ನಾಗೇಶ್ ಕೂಡಲೇ ಮನೆಗೆ ಧಾವಿಸಿದ್ದಾರೆ’.
‘ಬೆಳಿಗ್ಗೆ 9.45ಕ್ಕೆ ಮನೆಗೆ ಬಂದ ನಾಗೇಶ್, ಹಲವು ಸಲ ಬಾಗಿಲು ಬಡಿದರೂ ಪ್ರತಿಕ್ರಿಯೆ ಸಿಕ್ಕಿಲ್ಲ. ನಂತರ ಕಿಟಕಿ ಗಾಜು ಒಡೆದು ಒಳಗೆ ಹೋದಾಗ ನೆಲಮಹಡಿಯಲ್ಲಿ ತಂದೆಯ ಮೃತದೇಹ ಪತ್ತೆಯಾಗಿದೆ. ಇದರಿಂದ ಗಾಬರಿಗೊಂಡ ಅವರು ತಾಯಿಯನ್ನು ಹುಡುಕಿಕೊಂಡು ಮೊದಲ ಮಹಡಿಯ ಕೋಣೆಗೆ ಹೋದಾಗ, ಕೊಳೆತ ಸ್ಥಿತಿಯಲ್ಲಿ ಅವರ ಶವ ಬಿದ್ದಿರುವುದನ್ನು ಕಂಡಿದ್ದಾರೆ. ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ’ ಎಂದು ಅಧಿಕಾರಿಗಳು ವಿವರಿಸಿದರು.
ಪರಿಚಿತರ ಕೈವಾಡ?: ‘ದುಷ್ಕರ್ಮಿಗಳು ಬಲವಂತವಾಗಿ ಬಾಗಿಲು ತೆರೆದು ಒಳಗೆ ಬಂದಿಲ್ಲ. ಅಲ್ಲದೆ, ಕೃತ್ಯ ಎಸಗಿದ ನಂತರ ಮನೆಯಿಂದ ಯಾವುದೇ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿಲ್ಲ. ಮುನಿಯಪ್ಪ ಅವರ ಶವ ಬಿದ್ದಿದ್ದ ಸ್ಥಳದ ಪಕ್ಕದಲ್ಲೇ ದೇವರ ಕೋಣೆ ಇತ್ತು. ಅಲ್ಲಿ ಸುಮಾರು ಎರಡೂವರೆ ಕೆ.ಜಿಯಷ್ಟು ಬೆಳ್ಳಿ ಸಾಮಾನುಗಳಿದ್ದವು. ಹಂತಕರು ಅವುಗಳನ್ನೂ ಮುಟ್ಟಿಲ್ಲ’.
‘ಹೀಗಾಗಿ, ಕೃತ್ಯದಲ್ಲಿ ಪರಿಚಿತರ ಕೈವಾಡವಿರುವ ಬಗ್ಗೆ ಅನುಮಾನ ದಟ್ಟವಾಗಿದೆ. ಆಸ್ತಿ ವಿವಾದ, ಕೌಟುಂಬಿಕ ಕಲಹ ಸೇರಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ಮೂವರು ಇನ್‌ಸ್ಪೆಕ್ಟರ್‌ಗಳ ವಿಶೇಷ ತಂಡ ರಚಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಚೀಟಿಯಲ್ಲಿ ನಷ್ಟ: ‘ನಿವೃತ್ತಿ ನಂತರ ಮದುವೆ ಬ್ರೋಕರ್ ಕೆಲಸ ಮಾಡುತ್ತಿದ್ದ ಅಣ್ಣ, ಚೀಟಿ ವ್ಯವಹಾರ ಕೂಡ ನಡೆಸುತ್ತಿದ್ದ. ಎರಡು ವರ್ಷಗಳ ಹಿಂದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆತ, ಸ್ನೇಹಿತರು ಹಾಗೂ ಸಂಬಂಧಿಕರಿಂದ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈಚೆಗೆ ಸಮಾರಂಭವೊಂದರಲ್ಲಿ ಸಿಕ್ಕಾಗ, ಗ್ರಾಮದಲ್ಲಿದ್ದ ಜಮೀನನ್ನು ಮಾರಾಟ ಮಾಡಿ ಎಲ್ಲ ಸಾಲವನ್ನೂ ತೀರಿಸಿರುವುದಾಗಿ ಹೇಳಿದ್ದ’ ಎಂದು ಮುನಿಯಪ್ಪ ಅವರ ಚಿಕ್ಕಪ್ಪನ ಮಗಳು ಲಕ್ಷ್ಮಿ ತಿಳಿಸಿದರು.
ಬಂದು ಹೋಗಿದ್ದ ಮಗ
‘ಮುನಿಯಪ್ಪ ಅವರ ಕಾರಿನ ಕೀ ದ್ವಿತೀಯ ಪುತ್ರ ನಂದೀಶ್ ಬಳಿ ಇತ್ತು. ಭಾನುವಾರ ಬೆಳಿಗ್ಗೆ ಮನೆ ಹತ್ತಿರ ಬಂದಿದ್ದ ಅವರು, ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ತಂದೆಯ ಕಾರನ್ನು ತೆಗೆದುಕೊಂಡು ಹೋಗಿದ್ದರು. ಮಧ್ಯಾಹ್ನ ವಾಪಸಾದ ನಂದೀಶ್, ಪೋಷಕರು ಮಲಗಿರಬಹುದೆಂದು ಮಾತನಾಡಿಸುವ ಗೋಜಿಗೆ ಹೋಗದೆ ಕಾರು ನಿಲ್ಲಿಸಿ ತೆರಳಿದ್ದರು’ ಎಂದು ತನಿಖಾ ತಂಡದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
* ಮೂರು ದಿನಗಳಿಂದ ದಂಪತಿಯ ಮನೆಗೆ ದಿನಪತ್ರಿಕೆ ಬಂದಿಲ್ಲ. ಈ ಬಗ್ಗೆ ಪೇಪರ್ ಹಾಕುವ ಹುಡುಗನನ್ನು ವಿಚಾರಣೆ ನಡೆಸಬೇಕಿದೆ
-ತನಿಖಾಧಿಕಾರಿ