ಬೆಂಗಳೂರು: ವಿಚ್ಛೇದನ ನೀಡಲು ಮುಂದಾಗಿದ್ದ ಕಿಚ್ಚ ಸುದೀಪ್ -ಪ್ರಿಯಾ ದಂಪತಿ ಮತ್ತೆ ಒಂದಾಗುತ್ತಿದ್ದಾರೆ. ಪರಸ್ಪರ ಸಮ್ಮತಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ಇವರನ್ನು ಮತ್ತೆ ಒಂದಾಗುವಂತೆ ಮಾಡಿದ್ದು ಯಾರು ಗೊತ್ತಾ? ಕ್ರೇಜಿಸ್ಟಾರ್ ರವಿಚಂದ್ರನ್!

ಸಾಮಾನ್ಯವಾಗಿ ಕ್ರೇಜಿಸ್ಟಾರ್ ಇಂಥಾ ವಿಷಯಗಳಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ. ಆದರೆ ಕಿಚ್ಚ ಸುದೀಪ್ ಅವರ ದಾಂಪತ್ಯದಲ್ಲಿ ಮತ್ತೆ ಸಂತಸ ಅರಳುವಂತೆ ಮಾಡಲು ರವಿಚಂದ್ರನ್ ಪ್ರಯತ್ನಿಸಿದ್ದರು ಎಂದು ಸ್ಯಾಂಡಲ್‌ವುಡ್ ಮೂಲಗಳು ಹೇಳುತ್ತಿವೆ.

ಸುದೀಪ್ ತಮ್ಮ ‘ಮಾಣಿಕ್ಯ’ ಸಿನಿಮಾದಲ್ಲಿ ರವಿಚಂದ್ರನ್ ಅವರಿಗೆ ಅಪ್ಪನ ಪಾತ್ರ ನೀಡಿದ್ದರು. ಇತ್ತ ರವಿಚಂದ್ರನ್‍ಗೆ ಸುದೀಪ್ ಮೇಲೆ ಅಪಾರ ಪ್ರೀತಿ. ಆತ ನನ್ನ ಹಿರಿ ಮಗ ಎಂದು ಆ ಪ್ರೀತಿಯನ್ನು ರವಿಚಂದ್ರನ್ ವ್ಯಕ್ತ ಪಡಿಸಿದ್ದೂ ಉಂಟು.

ಇಂತಿರುವಾಗ ಸುದೀಪ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ರವಿಚಂದ್ರನ್ ಅವರಿಗೆ ಬೇಸರವನ್ನುಂಟು ಮಾಡಿದ್ದು, ಸುದೀಪ್ ಮತ್ತು ಪ್ರಿಯಾ ಅವರಿಗೆ ರವಿಮಾಮ ಬುದ್ಧಿ ಮಾತನ್ನೂ ಹೇಳಿದ್ದಾರೆ.

ರವಿಚಂದ್ರನ್ ಅವರ ಮಾತನ್ನು ಆಲಿಸಿದ ಈ ದಂಪತಿ ಇದೀಗ ‘ಒಂದಾಗೋಣ ಬಾ’ ಎಂದು ಜತೆ ಸೇರಿದ್ದಾರೆ.