ಬೆಳಗಾವಿ- ದೊಡ್ಮನೆ ಹುಡ್ಗ ಚಲನಚಿತ್ರದ ಪ್ರಚಾರಾರ್ಥ ಪವರ್ ಸ್ಟಾರ್ ಪುನಿತರಾಜಕುಮಾರ ಸೇರಿದಂತೆ ಚಿತ್ರದ ತಂಡದ ಸದಸ್ಯರು ಅ.೮ ರಂದು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಕಲಾಕಂಠಿರವ ಡಾ.ಶಿವರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಬೀರಾ ಅನಗೋಳಕರ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧ ಗಂಟೆಗೆ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಿಂದ ನಿರ್ಮಲ ಚಿತ್ರಮಂದಿರದವರೆಗೆ ಪುನಿತರಾಜಕುಮಾರ ಅವರನ್ನು ಭವ್ಯ ಮೆರವಣಿಗೆ ಮೂಲಕ ಕರೆದೊಯ್ಯಲಾಗುವುದು. ಈ ಅದ್ಧೂರಿ ಮೆರವಣಿಗೆಯಲ್ಲಿ ಜಿಲ್ಲೆಯ ೪ ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ನಗರದ ೬ ಚಿತ್ರಮಂದಿರಗಳಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಚಿತ್ರವೊಂದು ಪ್ರದರ್ಶನಗೊಳ್ಳುತ್ತಿರುವ ಹೆಗ್ಗಳಿಕೆಗೆ ದೊಡ್ಮನೆ ಹುಡ್ಗ ಪಾತ್ರವಾಗಿದೆ. ಡಾ.ಶಿವರಾಜ ಕುಮಾರ ಸಂಘದ ಅಧ್ಯಕ್ಷ ಕೆ.ಪಿ.ಶ್ರೀಕಾಂತ ಆಗಮಿಸುವರು. ಅಲ್ಲದೇ, ಸಿಂದೊಳ್ಳಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪುನಿತ ರಾಜಕುಮಾರ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ ಖಂಡೋಜಿ, ಶೇಖರ ಕಾಲೇರಿ ಮೊದಲಾದವರು ಇದ್ದರು.